ಬೆಂಗಳೂರು: ಅನಿರೀಕ್ಷಿತ ಬೆಳೆವಣಿಗೆಯಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಶಿವಲಿಂಗ ಶಿವಚಾರ್ಯ ಮಹಾಸ್ವಾಮಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ ಅವರಿಗೆ ಜೆಡಿಎಸ್ ಬೆಂಬಲ ಘೋಷಿಸಿದೆ.
![bng](https://etvbharatimages.akamaized.net/etvbharat/prod-images/kn-bng-4-jds-support-hdd-script-9024736_23112019193352_2311f_1574517832_14.jpg)
ಜೆಡಿಎಸ್ನಲ್ಲೇ ಇದ್ದ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎ ಮತ್ತು ಬಿ ಫಾರಂ ಅನ್ನು ಪಕ್ಷದ ವತಿಯಿಂದ ನೀಡಲಾಗಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಗಳಿಂದ ಶ್ರೀ ಶಿವಲಿಂಗ ಶಿವಚಾರ್ಯ ಸ್ವಾಮೀಜಿ ಅವರು ಪಕ್ಷದ ವತಿಯಿಂದ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ಕಾರಣ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಸ್ವಾಮೀಜಿ ಅವರಿಗೆ ಮನ್ನಣೆ ನೀಡಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ತದನಂತರ ಉಂಟಾದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಶ್ರೀಗಳು ಚುನಾವಣಾ ಕಣದಿಂದ ಹಿಂದೆ ಸರಿದು ಪಕ್ಷದ ವತಿಯಿಂದ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಉಳಿಸಿಕೊಳ್ಳಲು ಹಾಗೂ ಪಕ್ಷದ ಕಾರ್ಯಕರ್ತರ ಒತ್ತಾಯದ ಮೇರೆಗೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಉಜನೆಪ್ಪ ಜಟ್ಟೆಪ್ಪ ಕೋಡಿಹಳ್ಳಿ ಅವರಿಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಪ್ರಕಟಣೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.