ಬೆಂಗಳೂರು: ವಿಶ್ವಾಸಮತ ಮಂಡನೆ ವೇಳೆ ಜೆಡಿಎಸ್ನ ಎಲ್ಲ ಶಾಸಕರು ಉಪಸ್ಥಿತರಿದ್ದು ಪಕ್ಷದ ಪರ ಮತದಾನ ಮಾಡಬೇಕು, ಗೈರು ಹಾಜರಾಗುವುದು ಅಥವಾ ಹಾಜರಾಗಿ ಮತ ಚಲಾಯಿಸದೇ ವಿಪ್ ಅನ್ನು ಉಲ್ಲಂಘಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಈ ಸಂಬಂಧ ವಿಪ್ ಜಾರಿಗೊಳಿಸಿದ್ದು, "ಗುರುವಾರ ಬೆಳಿಗ್ಗೆ 11ಗಂಟೆಗೆ ವಿಧಾನಸೌಧದ ಮೊದಲನೇ ಮಹಡಿಯ ವಿಧಾನಸಭೆಯಲ್ಲಿ ನಾನು ವಿಶ್ವಾಸಮತ ಮಂಡಿಸಲಿದ್ದು ಜಾತ್ಯತೀತ ಜನತಾದಳದ ಸದಸ್ಯರಾಗಿರುವ ನೀವು ಕಡ್ಡಾಯವಾಗಿ ಹಾಜರಿರಬೇಕು. ವಿಶ್ವಾಸಮತ ಪ್ರಕ್ರಿಯೆ ಆರಂಭವಾದ ದಿನದಿಂದ ಮತದಾನ ಆಗುವವರೆಗಿನ ಎಲ್ಲಾ ಪ್ರಕ್ರಿಯೆಯಲ್ಲಿ ತಾವು ಉಪಸ್ಥಿತರಿರಬೇಕು ಎಂದು ಈ ಮೂಲಕ ಸಚೇತನ (ವಿಪ್) ನೀಡುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಪ್ ಪ್ರತಿಯನ್ನು ಎಲ್ಲ ಶಾಸಕರಿಗೂ ರವಾನಿಸಿದ್ದು, ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕ ಎಚ್.ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡರಿಗೂ ಕೂಡ ವಿಪ್ ನೀಡಲಾಗಿದೆ.