ಬೆಂಗಳೂರು : ಸಂಸದೆ ಸುಮಲತಾ ಅಂಬರೀಶ್ ಅವರ ಬಗ್ಗೆ ರಾಕ್ಲೈನ್ ವೆಂಕಟೇಶ್ ಅವರು ಅವಳು, ಇವಳು ಅಂತೆಲ್ಲಾ ಏಕವಚನದಲ್ಲಿ ಮಾತನಾಡಿದ್ದಾರೆ. ಅಂಬರೀಶ್ ಅಭಿಮಾನಿಗಳು ವೆಂಕಟೇಶ್ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು.
ಅದನ್ನು ಬಿಟ್ಟು ಕುಮಾರಸ್ವಾಮಿ ಅವರು ಹಳ್ಳಿ ಭಾಷೆ ಬಳಸಿದ್ದಕ್ಕೆ ಇಷ್ಟೊಂದು ಎಪಿಸೋಡ್ ಮಾಡಬೇಕಿತ್ತಾ ಎಂದು ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ನಿನ್ನೆ ಎಣ್ಣೆ ಕುಡಿದು ಮಾತನಾಡಿದ್ದಾರೆ ಅನಿಸುತ್ತದೆ. ನಿಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆಯನ್ನು ಏಕೆ ಕೊಟ್ಟಿದ್ದೀರಾ.. ಅದನ್ನು ನಾವು ಈಗ ಪ್ರಶ್ನೆ ಮಾಡುತ್ತೇವೆ. ರಾಕ್ಲೈನ್ ವೆಂಕಟೇಶ್ ವಿರುದ್ಧ ಅಂಬರೀಶ್ ಅಭಿಮಾನಿಗಳು ಪ್ರತಿಭಟನೆ ಮಾಡಲಿ ಎಂದು ಒತ್ತಾಯಿಸಿದರು.
ಸತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದ್ಹೇಳುವ ರಾಕ್ಲೈನ್ ವೆಂಕಟೇಶ್, ಏಕವಚನದಲ್ಲಿ ದೊಡ್ಡ ಕಲಾವಿದ ವಜ್ರಮುನಿ ಅವರ ಹೆಸರು ಹೇಳಿರುವುದು ಎಷ್ಟು ಸರಿ?. ವೆಂಕಟೇಶ್ ಅವರಿಗೂ ಕನ್ನಡನಾಡಿಗೂ ಏನು ಸಂಬಂಧ?. ವ್ಯಾಪಾರ ಮಾಡಲು ಬಂದಿದ್ದೀರಾ, ಬಂಡವಾಳ ಹಾಕಿ ಬಂಡವಾಳ ಮಾಡಿಕೊಂಡು, ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದೀರಾ ಮಾಡಿ, ನಿಮ್ಮ ವ್ಯವಹಾರ ಎಲ್ಲವೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಓದಿ: ನಾನು ಸಿನಿಮಾದವನಾಗಿ ಮಾತನಾಡಿದ್ದೇನೆ, ಹೆಚ್ಡಿಕೆ ರಾಜಕೀಯ ಬಗ್ಗೆ ಮಾತನಾಡಿಲ್ಲ : ರಾಕ್ಲೈನ್ ವೆಂಕಟೇಶ್
ರಾಕ್ಲೈನ್ ಅವರ ನಡವಳಿಕೆಗಳು ನಮ್ಮ ಕಾರ್ಯಕರ್ತರನ್ನು ಕೆರಳಿಸುವ ಕೆಲಸವಾಗುತ್ತಿದೆ. ಈ ವಿಚಾರವನ್ನು ಬೆಳೆಸುವುದು ಬೇಡ ಎಂದು ವರಿಷ್ಠರು ತಿಳಿಸಿದ್ದಾರೆ. ಹಾಗಾಗಿ, ಇದನ್ನು ಇಲ್ಲಿಗೆ ನಿಲ್ಲಿಸುವುದು ಒಳ್ಳೆಯದು ಎಂದರು.