ಬೆಂಗಳೂರು: ಹೆಚ್ಡಿಕೆ ಅವಧಿಯಲ್ಲಿ ಹಾಸನಕ್ಕೆ ಮಂಜೂರಾಗಿದ್ದ ಕಾಮಗಾರಿಗಳ ಅನುದಾನ ತಡೆಹಿಡಿದಿರುವುದನ್ನು ಖಂಡಿಸಿ ಜನವರಿ 25ರಂದು ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ ಹಾಸನ ಜಿಲ್ಲೆಯ ಜೆಡಿಎಸ್ ಪಕ್ಷದ ಶಾಸಕರುಗಳು ಪ್ರತಿಭಟನೆ ನಡೆಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಹಿಂದಿನ ಕಾಂಗ್ರೆಸ್-ಜನತಾದಳ (ಜಾತ್ಯಾತೀತ) ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಅಗತ್ಯವಿರುವ ಅನುದಾನವನ್ನು ಒದಗಿಸಿ, ಆಯ-ವ್ಯಯದಲ್ಲಿ ಅಳವಡಿಸಿ, ಅನುಮೋದನೆ ಪಡೆಯಲಾಗಿದೆ. ಆದರೆ, ಕಳೆದ ಒಂದೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರಾಜಕೀಯ ಹಗೆತನ ಮತ್ತು ವೈಯುಕ್ತಿಕ ದ್ವೇಷ ಸಾಧನೆ ದೃಷ್ಟಿಯಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿ, ವಿಧಾನಮಂಡಲದಲ್ಲಿ ಅನುಮೋದನೆಗೊಂಡ ಆಯ-ವ್ಯಯದಲ್ಲಿ ಅಡಕವಾಗಿದ್ದ ವಿವಿಧ ಹಂತದ ಅನುಷ್ಠಾನದಲ್ಲಿದ್ದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ತಡೆನೀಡಿದೆ. ಇಂತಹ ಸರ್ಕಾರದ ಕ್ರಮದಿಂದಾಗಿ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಪತ್ರದ ಮೂಲಕ ಆರೋಪಿಸಿದ್ದಾರೆ.
ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಟೆಂಡರ್ ಪ್ರಕ್ರಿಯೆಗಳು ನಡೆದು ಹಲವು ಕಾಮಗಾರಿಗಳಿಗೆ ಏಜೆನ್ಸಿಯನ್ನು ಸಹ ಗುರುತುಪಡಿಸಿ, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ. ಇಂತಹ ಕಾಮಗಾರಿಗಳಿಗೆ ತಡೆವೊಡ್ಡಿದಲ್ಲಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುವುದಲ್ಲದೆ, ಪ್ರಸ್ತುತ ವರ್ಷದಲ್ಲಿ ಒದಗಿಸಿದ ಅನುದಾನ ವೆಚ್ಚವಾಗದೆ, ಮುಂಬರುವ ವರ್ಷಗಳಲ್ಲಿ ಇದೇ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಹೆಚ್ಚಿನ ದರದಲ್ಲಿ ಒದಗಿಸಬೇಕಾಗುತ್ತದೆ.
ಹೀಗಾಗಿ, ಕೃಷ್ಣಾ ಆವರಣದಲ್ಲಿ ಹಾಸನ ಜಿಲ್ಲೆಯ ಜೆಡಿಎಸ್ ಪಕ್ಷದ ಶಾಸಕರುಗಳು ಪ್ರತಿಭಟನೆ ನಡೆಸುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ.