ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಜೆಡಿಎಸ್ನ ಚಟುವಟಿಕೆ ಗರಿಗೆದರಿದೆ.
ರಾಜ್ಯದ 30 ಜಿಲ್ಲೆಗಳಲ್ಲಿನ ಒಟ್ಟು 5762 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22 ಮತ್ತು 27ರಂದು ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿರುವ ಹಿನ್ನೆಲೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿರುವ ಜೆಡಿಎಸ್, ನಾಳೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ತುರ್ತು ಸಭೆ ಕರೆದಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ನಡೆಸುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣೆ ಮೇಲ್ವಿಚಾರಣೆ ವಹಿಸುವ ಬಗ್ಗೆ ವರಿಷ್ಠರು ಚರ್ಚಿಸಲಿದ್ದಾರೆ. ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಇತರ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೊಸ ಉತ್ಸಾಹದಲ್ಲಿ ಯುವ ಪಡೆ:
ಇನ್ನು ಹೊಸ ಉತ್ಸಾಹದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಯುವ ಪಡೆ ಕಟ್ಟಲು ಮುಂದಾಗಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ತನ್ನ ಬಲ ಹೆಚ್ಚಿಸಿಕೊಳ್ಳಲು ಜೆಡಿಎಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಳೇ ಮೈಸೂರು ಭಾಗ ಹೊರತುಪಡಿಸಿ ಉಳಿದೆಡೆ ಹೆಚ್ಚೆಚ್ಚು ಸ್ಥಳೀಯ ಸಂಸ್ಥೆ ಸದಸ್ಯರನ್ನು ಹೊಂದಿದರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಮಹತ್ವದ ಬೆಳವಣಿಗೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ನ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗ್ರಾಮ ಪಂಚಾಯತಿ ಚುನಾವಣೆ ಜವಾಬ್ದಾರಿ ತೆಗೆದುಕೊಳ್ಳುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಹಾಸನ, ಮಂಡ್ಯ, ಮೈಸೂರು, ರಾಮನಗರ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡುವ ಮೂಲಕ ಹೊಸ ಕಾರ್ಯತಂತ್ರ ರೂಪಿಸುತ್ತಿದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿದ್ದು, ಮುಂದೆ ಜಿಲ್ಲೆ ಮಟ್ಟದಲ್ಲೂ ಸಭೆಗಳನ್ನು ಮಾಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಪಕ್ಷ ಬಲಪಡಿಸಲು ವರಿಷ್ಠರು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಅಭ್ಯರ್ಥಿಗಳು ಯಾವುದೇ ಪಕ್ಷದ ಚಿಹ್ನೆ ಅಡಿ ಸ್ಪರ್ಧಿಸುವುದಿಲ್ಲವಾದರೂ ಪಕ್ಷಗಳ ಮತ ಬ್ಯಾಂಕ್‌ಗೆ ಗೆಲುವು ಅತ್ಯಗತ್ಯ. ಗ್ರಾಮ ಪಂಚಾಯತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಆ ಪಂಚಾಯತಿ ವ್ಯಾಪ್ತಿಯಲ್ಲಿ ಮತ ಬ್ಯಾಂಕ್ ಇಟ್ಟುಕೊಂಡಿರುತ್ತಾರೆ. ಇವರಿಗೆ ಮಣೆ ಹಾಕದ ಹೊರತು ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ಸುಲಭವಾಗಿ ಗೆಲ್ಲಲಾಗದೆಂಬ ವಾಸ್ತವ ಸಂಗತಿ ಜೆಡಿಎಸ್ಗೆ ಗೊತ್ತಿದೆ. ಹಾಗಾಗಿ ಮತ ಬ್ಯಾಂಕ್‌ಗೆ ತಳಮಟ್ಟದಿಂದ ಯೋಜನೆ ರೂಪಿಸಲು ವರಿಷ್ಠರು ತಯಾರಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.