ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಸಾಮಾನ್ಯರ ಮತ್ತು ರೈತರ ವಿರೋಧಿ ಧೋರಣೆಗಳನ್ನು ವಿರೋಧಿಸಿ ಜೆಡಿಎಸ್ ಜೂನ್ 28ರಂದು ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇದರ ಪೂರ್ವಭಾವಿ ಸಭೆಯನ್ನು ನಾಳೆ ಕರೆಯಲಾಗಿದೆ.
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಶರವಣ ಹಾಗೂ ಬೆಂಗಳೂರು ನಗರದ ಜೆಡಿಎಸ್ ಪಕ್ಷದ ಅಧ್ಯಕ್ಷ ಆರ್. ಪ್ರಕಾಶ್ ಅವರ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿ ಜೆ ಪಿ ಭವನದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಕರೆದಿರುವ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಯುವ ಜನತಾದಳ(ಜಾತ್ಯತೀತ)ದ ಅಧ್ಯಕ್ಷರು ಮತ್ತು ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕ ಆರ್. ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್ ಗೌಡ ಸೇರಿದಂತೆ ಬೆಂಗಳೂರು ನಗರದ ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ.
ಕೇಂದ್ರ ಸರ್ಕಾರದ ನೀತಿ-ಧೋರಣೆಯಿಂದ ತೈಲ-ಇಂಧನ ಬೆಲೆ ಪ್ರತಿನಿತ್ಯ ಹೆಚ್ಚುತ್ತಿದೆ. ಅದರಂತೆ, ರೈತನು ತನ್ನ ಕೃಷಿ ಭೂಮಿಗೆ ಬಳಸುವ ರಸಗೊಬ್ಬರದ ಬೆಲೆ ಸಹ ಗಗನಕ್ಕೇರಿದೆ. ಅಲ್ಲದೆ ಕೊರೊನಾ ಸೋಂಕಿನಿಂದ ರಾಜ್ಯದ ಜನತೆ ಬಾಧಿತರಾಗಿ, ಜನ ಜೀವನ ಅಸ್ತವ್ಯಸ್ತವಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 40 ಪೈಸೆಯಷ್ಟು ಏರಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಸಾಮಾನ್ಯರ ಮತ್ತು ರೈತರ ವಿರೋಧಿ ಧೋರಣೆಗಳನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿ, ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಜೆಡಿಎಸ್ ಉದ್ದೇಶಿಸಿದೆ.