ಬೆಂಗಳೂರು: ಜೆಡಿಎಸ್ನ ಭಾರೀ ಶಕ್ತಿ ಪ್ರದರ್ಶನ ಮಾರ್ಚ್ 26 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ಆದರೆ, ಮೈಸೂರು ಸಮಾವೇಶಕ್ಕೂ ಮುನ್ನ ಬೆಂಗಳೂರಿನಿಂದ ರೋಡ್ ಶೋ ನಡೆಸುವ ಉದ್ದೇಶವನ್ನು ಜೆಡಿಎಸ್ ಕೈಬಿಟ್ಟಿದೆ. ಅಂದು ನಡೆಯುವ ಸಮಾವೇಶದಲ್ಲಿ ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಪಕ್ಷದ ಶಾಸಕರು ಮತ್ತು ಪ್ರಮುಖ ನಾಯಕರ ಸಭೆ ಇಂದು ನಡೆಯಿತು.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರ ನೇತೃತದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಭೆ ನಡೆದಿದ್ದು, ಮಾರ್ಚ್ 26 ರ ಸಮಾವೇಶದಲ್ಲಿ ಜೆಡಿಎಸ್ ಹಲವು ಘೋಷಣೆಗಳನ್ನು ಮಾಡಲಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ನಡೆಯದಂತಹ ಐತಿಹಾಸಿಕ ಸಮಾವೇಶವನ್ನು ನಡೆಸಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದು, ಇಂದಿನ ಸಭೆಯಲ್ಲಿ ಸಮಾವೇಶದ ಪೂರ್ವಭಾವಿ ಸಿದ್ಧತೆಯನ್ನು ಪರಿಶೀಲಿಸಲಾಗಿದೆ.
ರೋಡ್ ಶೋ ಇಲ್ಲ: ಮೈಸೂರು ಸಮಾವೇಶಕ್ಕೂ ಮುನ್ನ ಬೆಂಗಳೂರಿನಿಂದ ರೋಡ್ ಶೋ ನಡೆಸುವ ಉದ್ದೇಶವನ್ನು ಪಕ್ಷ ಕೈ ಬಿಟ್ಟಿದೆ. ಈ ಮುಂದೆ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ತೆರೆದ ವಾಹನದಲ್ಲಿ ಬೆಂಗಳೂರಿನ ಕುಂಬಳಗೋಡಿನಿಂದ ಮೈಸೂರಿನ ಸಮಾವೇಶದ ಜಾಗಕ್ಕೆ ಕರೆದೊಯ್ಯುವುದು ಜೆಡಿಎಸ್ ಯೋಚನೆಯಾಗಿತ್ತು. ಆದರೆ ದೈಹಿಕ ಅನಾರೋಗ್ಯದಿಂದ ಬಳಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಕರೆದೊಯ್ಯಲು ವೈದ್ಯರು ಒಪ್ಪಿಗೆ ನೀಡಿಲ್ಲ. ಈ ವಯಸ್ಸಿನಲ್ಲಿ ದೇವೇಗೌಡರು ಮೈಸೂರಿನ ತನಕ ರೋಡ್ ಶೋ ಮೂಲಕ ಪ್ರಯಾಣಿಸುವುದು ಅಪಾಯ. ಹೀಗಾಗಿ ದೇವೇಗೌಡರನ್ನು ನೇರವಾಗಿ ಸಮಾವೇಶಕ್ಕೆ ಕರೆದೊಯ್ಯಬೇಕು ಎಂಬುದಾಗಿ ಹಲವು ನಾಯಕರು ಇಂದಿನ ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಅದೇ ರೀತಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರನ್ನು ಸಮಾವೇಶಕ್ಕೆ ಕರೆಸುವ ಯೋಚನೆ ಮಾಡಲಾಗಿತ್ತಾದರೂ ಇದೀಗ ಅದನ್ನು ಕೈ ಬಿಡಲಾಗಿದೆ. ಉನ್ನತ ಮೂಲಗಳ ಪ್ರಕಾರ, ಕೆ.ಸಿ. ಚಂದ್ರಶೇಖರರಾವ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ ಸಮಾವೇಶದಲ್ಲಿ ಭಾಗವಹಿಸುವುದು ಅವರಿಗೆ ಕಷ್ಟವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆದ್ದು ಅಧಿಕಾರ ಸೂತ್ರ ಹಿಡಿಯುವ ಕನಸು ಕಾಣುತ್ತಿರುವ ಜೆಡಿಎಸ್ ಮೈಸೂರು ಸಮಾವೇಶದ ಮೂಲಕ ತನ್ನ ಶಕ್ತಿ ಪ್ರದರ್ಶಿಸಲು ತೀರ್ಮಾನ ಮಾಡಿದೆ.
ಅನಿರೀಕ್ಷಿತ ಹಸ್ತ ನೆರವಿಗೆ ಬರುವ ವಿಶ್ವಾಸ: ಈ ಮಧ್ಯೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಎಂಬತ್ತರ ಗಡಿ ದಾಟುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿರುವ ಜೆಡಿಎಸ್, ರಾಜ್ಯದ ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಥಮ ಮತ್ತು ಜೆಡಿಎಸ್ ದ್ವಿತೀಯ ಸ್ಥಾನದಲ್ಲಿದೆಯೋ? ಅಂತ ಸ್ಥಳಗಳಲ್ಲಿ ಅನಿರೀಕ್ಷಿತ ನೆರವಿನ ಹಸ್ತ ತನ್ನ ನೆರವಿಗೆ ಬರಲಿದೆ ಎಂಬುದು ಜೆಡಿಎಸ್ ನಾಯಕರ ವಿಶ್ವಾಸ. ಇದೇ ರೀತಿ ಟಿಕೆಟ್ ಹಂಚಿಕೆಯ ಗೊಂದಲ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯವನ್ನು ಕಂಗೆಡಿಸಲಿದ್ದು, ಆ ಪಕ್ಷಗಳಿಂದ ಗಣನೀಯ ಸಂಖ್ಯೆಯ ನಾಯಕರು ಜೆಡಿಎಸ್‌ಗೆ ವಲಸೆ ಬರಲಿದ್ದಾರೆ ಎಂದು ಪಕ್ಷ ನಂಬಿದೆ.
ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ರೋಡ್ ಶೋ ವಿಚಾರದ ಬಗ್ಗೆ ಸುದೀರ್ಘ ಚರ್ಚೆಯಾಗಿರಲಿಲ್ಲ. ರೋಡ್ ಶೋ ನಾಲ್ಕು ದಿನಗಳ ಕ್ಲ್ಯಾರಿಟಿ ಇರಲಿಲ್ಲ. ಹೆಚ್.ಡಿ. ದೇವೇಗೌಡರ ಆರೋಗ್ಯದ ಬಗ್ಗೆ ಕ್ಲ್ಯಾರಿಟಿ ಇಲ್ಲ. ರಿಸ್ಕ್ ತೆಗೆದುಕೊಳ್ಳುವುದು ಬೇಡ ಅಂತ ವೈದ್ಯರು ಹೇಳಿದ್ದಾರೆ. ಸಭೆ ನಡೆಯುವ ಬಳಿ ನಾಲ್ಕು ಕಿ.ಮೀ ರೋಡ್ ಶೋ ಮಾಡಲಾಗುವುದು ಎಂದು ಹೇಳಿದರು. ಮಾ. 26 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಆಗಿದೆ. ಚಾಮುಂಡೇಶ್ವರಿ ಸನ್ನಿದಾನದಲ್ಲಿ ತಾಯಿ ಆಶೀರ್ವಾದ ಇರಲಿ ಅಂತಲೇ ಅಲ್ಲಿ ಕಾರ್ಯಕ್ರಮ ಮಾಡಲಾಗ್ತಿದೆ. ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಮುಂದಿನ ಕಾರ್ಯಕ್ರಮ ಮತವಾಗಿ ಪರಿಣಮಿಸಲಿದೆ ಎಂದು ತಿಳಿಸಿದರು.
ಸೈಲೆಂಟ್ ಸುನೀಲ್ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ಸೈಲೆಂಟ್ ಸುನೀಲ, ಸ್ಯಾಂಟ್ರೋ ರವಿ ಅಂಥವರೇ ಬಿಜೆಪಿಗೆ ಸೇರಿಕೊಳ್ಳುವುದು. ಇಂತಹವರಿಗೆ ಪ್ರಾಮುಖ್ಯತೆ ಕೊಡೋದು ಬೇಡ. ನೈತಿಕತೆ ಭಾಷಣ ಮಾಡ್ತಾರೆ, ವಿರುದ್ಧವಾಗಿ ನಡೆದುಕೊಳ್ತಾರೆ. ಜನ ಇಂತವರಿಂದ ಎಚ್ಚರವಾಗಿರಿ. ಇಂತವರಿಗೆ ಮತ ನೀಡಬೇಡಿ ಎಂದು ಹೇಳಿದರು.
ಕೋಲಾರ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಮಾಡುವುದಿಲ್ಲ ಎಂಬ ವಿಚಾರ ನನಗೂ ಬೆಳಗ್ಗೆ ಅಷ್ಟೇ ಗಮನಕ್ಕೆ ಬಂತು. ಅವರು ಸ್ಪರ್ಧೆ ಮಾಡಲಿ ಬಿಡಲಿ?. ಕುಮಾರಸ್ವಾಮಿ ಅವರು ನನ್ನ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ. ನಾನು ಜೆಡಿಎಸ್ನ ಸಾಮಾನ್ಯ ಕಾರ್ಯಕರ್ತ. ಎರಡು ತಿಂಗಳ ಹಿಂದೆ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದು, ನಾನು ಕೆಲಸ ಮಾಡ್ತಿದ್ದೇನೆ. ನನ್ನ ಸೇವಾ ಕಾರ್ಯ ಮೆಚ್ಚಿ ಜನ ಪಕ್ಷಕ್ಕೆ ಬರುತ್ತಿದ್ದಾರೆ. ಕೂಲಿ ಕಾರ್ಮಿಕರು, ಎಲ್ಲಾ ಜಾತಿಯ ಜನ ಜೆಡಿಎಸ್ ಜೊತೆ ಇದ್ದಾರೆ. ಕಳೆದ ಬಾರಿ ಜೆಡಿಎಸ್‌ಗೆ ಬಂದ ಮತಗಳು ಎಲ್ಲೂ ಚದುರಲ್ಲ. ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಬಂದಾಗ ನನಗೆ ಯಾವುದೇ ಭಯ ಆಗಲಿಲ್ಲ. ಪಕ್ಷದ ಮೇಲೆ ನಂಬಿಕೆ ಇಟ್ಟು ನನಗೆ ಟಿಕೆಟ್ ನೀಡಿದ್ರು. 45 ವರ್ಷ ಸುದೀರ್ಘ ರಾಜಕಾರಣ, ಮಾಜಿ ಸಿಎಂ ಆದ್ರೂ ಅಪಾರ ಗೌರವ ಇದೆ. ಅವರ ವಿರುದ್ಧ ಸ್ಪರ್ಧೆ ಮಾಡೋದು ನನಗೆ ಹೆಮ್ಮೆ ಇದೆ. ಕುಮಾರಣ್ಣ ಮಾಡಿದ ಕೆಲಸ ನಮ್ಮ ಕೈ ಹಿಡಿಯಲಿದೆ ಎಂದರು.
ಇದನ್ನೂ ಓದಿ: ಈ ಬಾರಿಯೂ ಬಿಜೆಪಿಗೆ ಜನ ಆಶೀರ್ವಾದ ಮಾಡಲಿದ್ದು, ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ: ಧರ್ಮೇಂದ್ರ ಪ್ರಧಾನ್