ಬೆಂಗಳೂರು : ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ವಿಲೀನವಾಗುವುದಿಲ್ಲ ಎಂದು ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆ ಸಮಯದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಪದೇ ಪದೇ ಅಡ್ಡಿಪಡಿಸುತ್ತಿದ್ದುದನ್ನು ಕಂಡು ಎದ್ದು ನಿಂತ ರೇವಣ್ಣ, ಕಾಮತ್ ಪರವಾಗಿ ಮಾತನಾಡಿದರು. ಇದಕ್ಕೆ ಕಾಂಗ್ರೆಸ್ಸಿಗರು, ನೀವು ಬಿಜೆಪಿಯೊಂದಿಗೆ ವಿಲೀನವಾಗಿದ್ದೀರಿ ಎಂದು ಕಾಲೆಳೆದರು.
ಯಾವುದೇ ಪಕ್ಷದ ಜೊತೆ ಜೆಡಿಎಸ್ ವಿಲೀನವಿಲ್ಲ. ವಿಲೀನವಾಗಿ ಕೆಲವರು ವನವಾಸ ಅನುಭವಿಸುತ್ತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಕಾಂಗ್ರೆಸ್‌ಗೆ ಬೆಂಬಲ ನೀಡಿದರೂ ಜೈಲುವಾಸ ಅನುಭವಿಸಬೇಕಾಯಿತು ಎಂದು ರೇವಣ್ಣ ವ್ಯಂಗ್ಯವಾಡಿದರು. ನಂತರ ಸಭಾಧ್ಯಕ್ಷರು ಮಧ್ಯಪ್ರವೇಶಿಸಿ, ಕಾಮತ್ ಅವರಿಗೆ ಮಾತನಾಡುವಂತೆ ಸೂಚಿಸಿ ಚರ್ಚೆ ಮುಕ್ತಾಯಗೊಳಿಸಿದರು.
ತುಳು ಭಾಷೆಯಲ್ಲಿ ಶಾಸಕರ ಮಾತು : ಸದನದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್, ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಹಾಗು ಬಿಜೆಪಿ ಸದಸ್ಯ ವೇದವ್ಯಾಸ್ ಕಾಮತ್ ತುಳು ಭಾಷೆಯಲ್ಲಿ ಸಂವಾದ ನಡೆಸಿದ ಪ್ರಸಂಗ ನಡೆಯಿತು. ಗಮನ ಸೆಳೆಯುವ ಸೂಚನೆ ವೇಳೆ, ರಾಜ್ಯದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ರಾಜ್ಯವು ಘೋಷಿಸಬೇಕು ಎಂದು ಒತ್ತಾಯಿಸಿದಾಗ ತುಳು ಭಾಷೆಯಲ್ಲಿಯೇ ಮಾತನಾಡಿದರು. ಇದೇ ವೇಳೆ ಬಿಜೆಪಿ ಹಿರಿಯ ಸದಸ್ಯ ಸುರೇಶ್ ಕುಮಾರ್ ಎದ್ದು ನಿಂತು ನಿಮ್ಮ ಸಂಭಾಷಣೆ ದಾಖಲಿಸಲು ಕಷ್ಟವಾಗುತ್ತದೆ ಎಂದು ಹೇಳಿದಾಗ ಇತರರು ಅವರಿಗೆ ದನಿಗೂಡಿಸಿದರು. ತುಳು ಭಾಷೆಯನ್ನು ಮೂವರು ಮಾತನಾಡುತ್ತಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಎದ್ದು ನಿಂತು ನಾವು ಈ ಪ್ರಶ್ನೆಗೆ ಉತ್ತರ ನೀಡಬೇಕು. ಆದರೆ, ಸದಸ್ಯರು ಏನು ಮಾತನಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು. ನಂತರ ಕನ್ನಡದಲ್ಲಿಯೇ ಮೂವರೂ ಮಾತು ಮುಂದುವರಿಸಿದರು.
ಆರಂಭದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಅಶೋಕ್ ಕುಮಾರ್ ರೈ, ಕೇಂದ್ರ ಮತ್ತು ರಾಜ್ಯ ಸರ್ಕಾರ ತುಳು ಅಕಾಡೆಮಿಗಳನ್ನು ಸ್ಥಾಪಿಸಿವೆ. ಅಮೆರಿಕದಲ್ಲಿನ ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಕೆಲವು ಪ್ರವೇಶ ಪರೀಕ್ಷೆಗಳನ್ನು ಬರೆಯಬಹುದಾದ 17 ಭಾರತೀಯ ಭಾಷೆಗಳಲ್ಲಿ ತುಳು ಒಂದೆಂದು ಗುರುತಿಸಲಾಗಿದೆ. ಈಗಾಗಲೇ ಬೇರೆ ಬೇರೆ ಇಲಾಖೆಗಳಿಂದ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದಕ್ಕೆ ನಿರಾಪೇಕ್ಷಣಾ ಪತ್ರ ಪಡೆಯುವ ಪ್ರಕ್ರಿಯೆ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರವು ಪ್ರಕ್ರಿಯೆಗಳನ್ನು ಮುಗಿಸಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಗತ್ಯ ಪ್ರಕ್ರಿಯೆಯನ್ನು ನಡೆಸಿದೆ. ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆಯ ಸಮಿತಿಯು ವರದಿಯನ್ನು ನೀಡಿದೆ. ಈ ಕುರಿತು ಸಚಿವ ಸಂಪುಟ ಸಭೆಯಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದರು.
ಸಭಾಧ್ಯಕ್ಷ ಖಾದರ್ ಮಾತನಾಡಿ, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಹೇಳಿದರು. ಸಚಿವ ಶಿವರಾಜ್ ತಂಗಡಗಿ, ಮೋಹನ್ ಆಳ್ವ ಅವರ ವರದಿಯಲ್ಲಿ ಪ್ರಮುಖ ಅಂಶಗಳಿಗೆ ಇಲಾಖೆಯ ಅಭಿಪ್ರಾಯವನ್ನು ಪಡೆಯಬೇಕು ಎಂದು ತಿಳಿಸಲಾಗಿದೆ. ಆದ್ದರಿಂದ ಎಲ್ಲಾ ವರದಿಗಳನ್ನು ಪಡೆದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರ್ಕಾರವು ಸಹ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ವಿಧಾನಸಭೆಯಲ್ಲಿ ಬಿಜೆಪಿ ಶಾಸಕನಿಂದ ಪ್ರಧಾನಿ ಮೋದಿ ಸಾಧನೆ ಪ್ರಸ್ತಾಪ: ಆಡಳಿತ - ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ