ಬೆಂಗಳೂರು: ಕರುನಾಡ ಜನತೆಗಾಗಿ ಜೆಡಿಎಸ್ 12 ಭರವಸೆಯ ಪತ್ರ ಸಿದ್ದಪಡಿಸಿದ್ದು, ಇಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬಿಡುಗಡೆ ಮಾಡಿದ್ದಾರೆ. ಪದ್ಮನಾಭನಗರದಲ್ಲಿರುವ ಗೌಡರ ನಿವಾಸದಲ್ಲಿ ಇಂದು ಭರವಸೆ ಪತ್ರ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ಜನತಾ ಪ್ರಣಾಳಿಕೆ ಕರುಡು ರಚನಾ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್ ಅವರು, ಸದಸ್ಯರಾದ ಕುಪೇಂದ್ರ ರೆಡ್ಡಿ, ಕೆ.ಎನ್. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಘೋಷಣೆ ಮಾಡಿರುವ 12 ಭರವಸೆಗಳನ್ನು ಈಡೇರಿಸುವುದಾಗಿ ಇದೇ ವೇಳೆ, ದೇವೇಗೌಡರು ಆಶ್ವಾಸನೆ ನೀಡಿದರು.
ಜೆಡಿಎಸ್ ಭರವಸೆ ಪತ್ರದಲ್ಲೇನಿದೆ?:
1 ) ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ.
2 ) ಕನ್ನಡವೇ ಮೊದಲು.
3 ) ಶಿಕ್ಷಣವೇ ಆಧುನಿಕ ಶಕ್ತಿ.
4 ) ಆರೋಗ್ಯ ಸಂಪತ್ತು.
5 ) ರೈತ ಚೈತನ್ಯ.
6 ) ಹಿರಿಯ ನಾಗರಿಗರಿಕೆ ಸನ್ಮಾನ.
7 ) ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ.
8 ) ಯುವಜನ ಸಬಲೀಕರಣ.
9 ) ವಿಕಲ ಚೇತನರಿಗೆ ಆಸರೆ.
10) ಆರಕ್ಷಕರಿಗೆ ಅಭಯ..
11) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಏಳಿಗೆ.
12) ವೃತ್ತಿ ನಿರತ ವಕೀಲರ ಅಭ್ಯುದಯ.
ಜೆಡಿಎಸ್ ನ ಭರವಸೆ ಪತ್ರದಲ್ಲಿರುವ ಅಂಶಗಳು : ಭರವಸೆ ಪತ್ರದಲ್ಲಿ ಮುಖ್ಯವಾಗಿ ಈ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅವುಗಳೆಂದರೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನ, ವರ್ಷಕ್ಕೆ 5 ಸಿಲಿಂಡರ್ ಉಚಿತ, ಗರ್ಭಿಣಿಯರಿಗೆ 6 ತಿಂಗಲ ಕಾಲ 6 ಸಾವಿರ ಭತ್ಯೆ, ವಿಧವಾ ವೇತನಾ 900 ನಿಂದ 2500 ಕ್ಕೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ 5 ಸಾವಿರ ವೇತನ, ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ನಿವೃತ್ತ ಆದವರಿಗೆ ಪಿಂಚಣಿ, ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಕಾಯ್ದೆ ಜಾರಿ, ಕೇಂದ್ರ ಸರ್ಕಾರದ ಎಲ್ಲ ಪರೀಕ್ಷೆ ಕನ್ನಡದಲ್ಲಿ ಬರೆಯಲು ಆದ್ಯತೆ ನೀಡಲು ಕೇಂದ್ರದ ಮೇಲೆ ಒತ್ತಾಯ, ಪ್ರತಿ ಎಕರೆಗೆ 10 ಸಾವಿರ ಸಹಾಯ ಧನ, ಕೃಷಿ ಕಾರ್ಮಿಕ ಕುಟುಂಬಕ್ಕೆ 2000 ಸಹಾಯ ಧನ, ರೈತರ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ಸಹಾಯ ಧನ, ಹಿರಿಯ ನಾಗರಿಕರಿಗೆ ಮಾಶಾಸನ 1500 ರಿಂದ 5 ಸಾವಿರಕ್ಕೆ ಹೆಚ್ಚಳ.
ಇನ್ನು, ಹೈಸ್ಕೂಲ್ನಲ್ಲಿ ಓದೋ ಎಲ್ಲಾ ಮಕ್ಕಳಿಗೆ ಉಚಿತ ಬೈಸಿಕಲ್, ಡಿಗ್ರಿ ಕಾಲೇಜು ಓದೋ 18 ವರ್ಷ ತುಂಬಿರೋ 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ಗಾಡಿ, ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಸಿಎಂ ರಿಲೀಫ್ ಫಂಡ್ ನಿಂದ 25 ಲಕ್ಷ ಪರಿಹಾರ ಧನ , 24 ಗಂಟೆಯಲ್ಲಿ ನೀಡಿಕೆ. ಮತ್ತು ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಅಡಿ ಸೇರ್ಪಡೆ ಯಾಗದ ಕಾಯಿಲೆಗೂ ಪರಿಹಾರ. ಜಿಲ್ಲೆಗೊಂದು ಜಯದೇವ ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ರಾಜ್ಯದಲ್ಲಿ ನಿಮಾನ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ ನರರೋಗ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡುವುದು ಜೆಡಿಎಸ್ನ ಪ್ರಮುಖ ಆದ್ಯತೆಗಳಾಗಿವೆ.
ದೇವೇಗೌಡರ ಮಾತು : ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. 12 ಭರವಸೆಗಳನ್ನು ನಾನು ಘೋಷಣೆ ಮಾಡಿದ್ದೇನೆ. ಅಲ್ಪಸಂಖ್ಯಾತರಿಗೆ ಏನೇನು ಮಾಡಬೇಕು ಅಂತ ಒಂದು ಕಮಿಟಿ ನೇಮಕ ಮಾಡಿ ಅವರು ಕೊಟ್ಟ ವರದಿ ಜಾರಿ ಮಾಡೋದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರ ಬಗ್ಗೆ ಏನು ಮಾಡಿದ್ದಾರೆ ಅಂತ ವಿವರವಾಗಿ ಹೇಳಿದ್ದಾರೆ. ಪ್ರಣಾಳಿಕೆ ಬಿಡುಗಡೆ ಬೇರೆ ದಿನ ಮಾಡಲಾಗುತ್ತದೆ. ಇಂದು ಕಾರ್ಯಕ್ರಮಗಳ ಭರವಸೆ ಮಾತ್ರ ಇಂದು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು. ಉಳಿದ ಅಭ್ಯರ್ಥಿಗಳ ಆಯ್ಕೆಯಲ್ಲಿ ನನ್ನದು ಯಾವುದೇ ತಕರಾರಿಲ್ಲ ಎಂದ ಗೌಡರು, ಪದ್ಮನಾಭನಗರದಲ್ಲಿ ಡ್ರಾಮಾ ನಡೆಯುತ್ತಿದೆ. ಪದ್ಮನಾಭನಗರದ ಡ್ರಾಮ ನನಗೆ ಗೊತ್ತಿದೆ. ಬೇರೆ ಯಾವುದಕ್ಕೂ ನಾನು ಕೈ ಹಾಕಲ್ಲ. ಕುಮಾರಸ್ವಾಮಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ನಾನು ಸಿಎಂ ಆಗಿದ್ದಾಗ ಏನೂ ಮಾಡಿದ್ದೆ ಎಂದು ದಾಖಲೆ ಇದೆ. ಯಾವುದು ಸುಳ್ಳು ಹೇಳಲ್ಲ. ಒಕ್ಕಲಿಗರು ಹಿಂದುಳಿದವರು ಎಂದು ಮೀಸಲಾತಿ ವಿಚಾರದಲ್ಲಿ ಬರೆದಿದ್ದಾರೆ. ದಯವಿಟ್ಟು ಓದಿ, ನನ್ನ ಸಮಾಜಕ್ಕೆ 4% ಕೊಟ್ಟು, 4% ಮೀಸಲಾತಿ ಮುಸಲ್ಮಾನ ಸಮುದಾಯಕ್ಕೆ, ಶೇ1ರಷ್ಟು ಉಳಿದ ಸಣ್ಣ ಸಮುದಾಯಗಳಿಗೆ ನೀಡಿದ್ದೆ. ಚಂದ್ರಶೇಖರ್ ಕೈ ಕಾಲು ಕಟ್ಟಿ ವಾಲ್ಕೀಕಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದೆ. ಯಾರಿಗೂ ಕೇಡು ಬಯಸಿಲ್ಲ ಎಂದು ಹೇಳಿದರು.
ಮೀಸಲಾತಿ ಬಗ್ಗೆ ಪ್ರಧಾನಿಗೆ ಪತ್ರ : ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳಿಗೆ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು ಎಂದರು. ಮುಂದುವರೆದು ಹನ್ನೆರಡು ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟು ನಾನು ಪ್ರಧಾನಿಯಾಗಿದ್ದೆ. ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆಕಸ್ಮಿಕವಾಗಿ ಪಿಎಂ ಆಗಿದ್ದು ಅಲ್ಲ. ನಾನು ಜನರಿಂದಲೇ ಆಯ್ಕೆಯಾದವನು ಎಂದು ಸ್ಪಷ್ಟಪಡಿಸಿದರು.
ಇದು ಭರವಸೆಯಷ್ಟೆ, ಪ್ರಣಾಳಿಕೆಯಲ್ಲ-ಹೆಚ್. ಡಿ. ದೇವೇಗೌಡ: ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಎಲ್ಲ ಕಡೆ ಓಡಾಟ ನಡೆಸಿ ವಿಷಯ ಸಂಗ್ರಹ ಮಾಡಿದ್ದಾರೆ. ಮುಂದಿನ ದಿನ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತಾರೆ. ಕಮ್ಯುನಿಸ್ಟ್ ಪಾರ್ಟಿ ನನ್ನ ಸಂಪರ್ಕ ಮಾಡಿತ್ತು. ನಾನು ಆಸ್ಪತ್ರೆಯಲ್ಲಿ ಇದ್ದಾಗ ಸಂಪರ್ಕ ಮಾಡಿದ್ದರು. ಎಲ್ಲ ಹೊಣೆಗಾರಿಕೆಯನ್ನು ಕುಮಾರಸ್ವಾಮಿಗೆ ನೀಡಿದ್ದೇನೆ. ಮೂರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗುತ್ತಾರೆ ಎಂದು ಹೇಳಿದರು. ನಮ್ಮ ಶಾಸಕರನ್ನು, ರಾಜ್ಯಾಧ್ಯಕ್ಷ ಇಬ್ರಾಹಿಂ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಮಾರಸ್ವಾಮಿ ಹೋಗುತ್ತಾರೆ. ಬಾಕಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡುತ್ತಾರೆ. ಇದು ಭರವಸೆಯಷ್ಟೆ, ಪ್ರಣಾಳಿಕೆಯಲ್ಲ ಎಂದರು.
ಅರಸೀಕೆರೆ ಕ್ಷೇತ್ರದ ಟಿಕೆಟ್ ತೀರ್ಮಾನ ನಾನೇ ಮಾಡುವೆ : ಅರಸೀಕೆರೆಯಲ್ಲಿ ಸಂತೋಷ್ ಮತ್ತು ಅಶೋಕ್ ಜೊತೆ ನಾನೇ ಮಾತುಕತೆ ನಡೆಸುತ್ತಿದ್ದೇನೆ. ಅರಸೀಕೆರೆಯಲ್ಲಿ ಟಿಕೆಟ್ ತೀರ್ಮಾನ ನಾನೇ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಭಾರತಿ ಶಂಕರ್ ಜೆಡಿಎಸ್ ಸೇರ್ಪಡೆ : ಶಾಲು ಹೊದಿಸಿ ಭಾರತಿ ಶಂಕರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ವರುಣಾ ಕ್ಷೇತ್ರದಿಂದ ಭಾರತೀ ಶಂಕರ್ ಹಾಗೂ ಚಿತ್ರದುರ್ಗ ಕ್ಷೇತ್ರದಿಂದ ರಘು ಆಚಾರ್ಯ ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ ಎಂದು ಇದೇ ವೇಳೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಮಿಸ್; ಜೆಡಿಎಸ್ ಸೇರಿದ ರಘು ಆಚಾರ್