ಬೆಂಗಳೂರು : ನವೆಂಬರ್ 1 ರಿಂದ ಪಂಚರತ್ನ ರಥಯಾತ್ರೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ನಾಳೆಯಿಂದ ಎರಡು ದಿನಗಳ ಕಾಲ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ಹಮ್ಮಿಕೊಂಡಿದೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಗೆ 13 ರಾಜ್ಯಗಳಿಂದ ಕಾರ್ಯಕಾರಿ ಸಮಿತಿಯ ಸದಸ್ಯರು ಆಗಮಿಸಲಿದ್ದಾರೆ. ಜೆಡಿಎಸ್ ಕಾರ್ಯಕಾರಿ ಸಮಿತಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಆಗಲಿದೆ ಎಂದು ತಿಳಿಸಿದರು.
ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ರಾಷ್ಟ್ರ ಹಾಗೂ ರಾಜ್ಯದ ಸಮಸ್ಯೆಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು. ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನ 1ರಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ನವೆಂಬರ್ 1ರಂದು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿಷೇಕದ ಮೊದಲ ಸಭೆ ನಡೆಯಲಿದೆ. ನಾಳೆ ಅತ್ಯಂತ ಪ್ರಸಕ್ತ ದಿನವಾದ ಹಿನ್ನೆಲೆಯಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. ನ.1ರಿಂದ ಮುಳಬಾಗಿಲಿನಲ್ಲಿ ರೈತರ ಸಭೆ ನಡೆಯಲಿದೆ ಎಂದು ತಿಳಿಸಿದರು. 126 ಅಭ್ಯರ್ಥಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಚಾಮುಂಡೇಶ್ವರಿ ಸನ್ನಿಧಿಗೆ ಅಭ್ಯರ್ಥಿಗಳೂ ಭೇಟಿ ನೀಡಿದ್ದರು. ನವೆಂಬರ್ 1ರಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಜೆಡಿಎಸ್ನಿಂದ ಪಂಚರತ್ನ ಕಾರ್ಯಕ್ರಮ : ಇನ್ನು, ಪಂಚರತ್ನ ಕಾರ್ಯಕ್ರಮಗಳು ನಾಡಿಗೆ ಹೇಗೆ ಪೂರಕ ಎಂದು ಮನವರಿಕೆ ಮಾಡಿಕೊಡಲಾಗುವುದು. ಪಂಚರತ್ನ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾನು ಈ ಬಾರಿ ಅಧಿವೇಶನದಲ್ಲಿ ಭಾಗವಹಿಸುವುದು ಅನುಮಾನ. ನಮ್ಮ ಪಕ್ಷದ ಶಾಸಕರಿಗೆ ಅಧಿವೇಶನದಲ್ಲಿ ಭಾಗವಹಿಸಲು ಸೂಚನೆ ನೀಡಲಾಗುವುದು. ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡ ಶಾಸಕರನ್ನು ಕರೆ ತರುವ ಕೆಲಸ ನಡೆಯುತ್ತಿದೆ. ಎಲ್ಲರೂ ಬರುವ ವಿಶ್ವಾಸವೂ ಇದೆ ಎಂದು ತಿಳಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಹೆಚ್ಡಿಡಿ ಮರು ನೇಮಕ : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಹೆಚ್.ಡಿ. ದೇವೇಗೌಡ ಅವರನ್ನು ಮರು ನೇಮಕ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ದೇವೇಗೌಡರಿಗೆ ಮಂಡಿ ನೋವು ಹಿನ್ನೆಲೆಯಲ್ಲಿ ಬೇರೆಯವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಮೂಲಗಳ ಪ್ರಕಾರ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ದೇವೇಗೌಡರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :3 ವರ್ಷದ ನಂತರ ಜೆಡಿಎಸ್ ಕಚೇರಿಗೆ ಜಿಟಿಡಿ ಭೇಟಿ; ಹಬ್ಬದ ಸಿಹಿ ಹಂಚಿ, ರಾಜಕೀಯ ಚರ್ಚೆ