ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಜೆಡಿಎಸ್ ಶಾಸಕರಾದ ಜಿ ಟಿ ದೇವೇಗೌಡರು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಪರಸ್ಪರರು ಭೇಟಿಯಾಗಿರೋದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಬಗ್ಗೆ ಮಾತನಾಡಿದ ಜಿಟಿ ದೇವೇಗೌಡ, ಜೆಡಿಎಸ್‌ನಿಂದ ನನಗೆ ಬಹಳ ನೋವಾಗಿದೆ. ಜೆಡಿಎಸ್ ಸಭೆ, ಸಮಾರಂಭಗಳಿಗೆ ನಾನು ಹೋಗ್ತಿಲ್ಲ. ಸದ್ಯ ಮೂರುವರೆ ವರ್ಷಗಳವರೆಗೂ ನಾನು ಏನೂ ಮಾತನಾಡಲ್ಲ. ಬಿಜೆಪಿ ಕೂಡಾ ನನಗೆ ಬಾ ಅಂತಾ ಹೇಳಿಲ್ಲ. ನಾನು ಕೂಡಾ ಬರ್ತೇನೆ ಎಂದು ಹೇಳಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಮಗಾರಿಗಳ ತಡೆ ಆಗಿವೆ. ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಇದರ ಚರ್ಚೆಗೆ ಸಿಎಂ ಭೇಟಿಗೆ ಆಗಮಿಸಿದ್ದೆ. ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಭೇಟಿಯ ಬಗ್ಗೆ ಸಮಾಜಾಯಿಷಿ ಕೊಟ್ಟರು.
ಇದೇ ವೇಳೆ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಪಕ್ಷ ಸೇರುವ ಪ್ರಶ್ನೆ ಇಲ್ಲ. ನಾನು ಈಗ ಶಾಸಕನಾಗಿದ್ದೀನಿ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ನಾನು ತಟಸ್ಥನಾಗಿದ್ದೇನೆ ಎಂದು ಸಾ ರಾ ಮಹೇಶ್ ನನ್ನ ಬಗ್ಗೆ ಹೇಳಿರೋದು ಗೊತ್ತಿಲ್ಲ. ನಾವಿಬ್ರೂ ಭೇಟಿ ಆಗಿಲ್ಲ, ಪಕ್ಷದಲ್ಲಿ ನಾನು ತಟಸ್ಥನಾಗಿರೋದು ಹೌದು. ಪಕ್ಷದಲ್ಲಿ ನನಗೆ ತುಂಬಾ ನೋವಾಗಿದೆ. ಇದರಿಂದ ನನಗೆ ಸುಧಾರಿಸಿಕೊಳ್ಳಲು ಸಮಯಬೇಕು. ನೋವಿನಿಂದ ಹೊರಬರಲು ಸಮಯಬೇಕು. ಕಾರ್ಯಕರ್ತರನ್ನು ಬಿಡಕ್ಕಾಗಲ್ಲ. ಹಾಗಾಗಿ ಇದೀನಿ ಇಂದು ಬಿಜೆಪಿ ಸೇರ್ಪಡೆ ವಿಚಾರವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.