ಬೆಂಗಳೂರು: ಬಿಎಂಎಸ್ ಟ್ರಸ್ಟ್ ಅಕ್ರಮ ಹಿನ್ನೆಲೆ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ರಾಜೀನಾಮೆಗೆ ಒತ್ತಾಯಿಸಿ ಜೆಡಿಎಸ್ ಶಾಸಕ ಡಾ.ಅನ್ನದಾನಿ ಅವರು ಸ್ಪೀಕರ್ ಪೀಠದ ಬಳಿ ಪ್ರತಿಭಟನೆ ನಡೆಸಲು ಮುಂದಾದರು. ಆಗ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಇದು ನಿಮ್ಮದು ಅತಿಯಾಯಿತು ಎಂದು ಗದರಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಜೆಡಿಎಸ್ ಶಾಸಕರು ಬೆಳಗ್ಗೆಯಿಂದಲೇ ಸದನದ ಬಾವಿಗಿಳಿದು ಬಿಎಂಎಸ್ ಟ್ರಸ್ಟ್ ಪ್ರಕರಣವನ್ನು ತನಿಖೆಗೆ ವಹಿಸಬೇಕು. ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕೈಯಲ್ಲಿ ಪೋಸ್ಟರ್ಗಳನ್ನು ಹಿಡಿದು ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಡಾ. ಅನ್ನದಾನಿ ಅವರು ಸದನದ ಬಾವಿಯಿಂದ ಏಕಾಏಕಿ ಸಭಾಧ್ಯಕ್ಷರ ಪೀಠದ ಮೇಲೆ ಹತ್ತಲು ಮುಂದಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಇದರಿಂದ ಸಿಟ್ಟಾದ ಸ್ಪೀಕರ್, ನೀವು ಉಪನ್ಯಾಸಕರಾಗಿದ್ದವರು. ಈ ರೀತಿ ನಡೆದುಕೊಳ್ಳುವುದು ಶೋಭೆ ತರುತ್ತದೆಯೇ ? ಪ್ರತಿಭಟನೆ ಬೇಕಾದರೆ ಬಾವಿಯಲ್ಲಿ ಮಾಡಿಕೊಳ್ಳಿ. ಇಲ್ಲಿ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಲು ಅನ್ನದಾನಿ ಮುಂದಾಗುತ್ತಿದ್ದಂತೆ ನೀವು ಹೋಗುತ್ತಿರೋ ಇಲ್ಲವೋ ಎಂದು ಗದರಿಸುತ್ತಿದ್ದಂತೆ, ಬಾವಿಯಲ್ಲಿದ್ದ ಸಾ.ರಾ. ಮಹೇಶ್ ಅನ್ನದಾನಿಯನ್ನು ಎಳೆದುಕೊಂಡರು.