ಬೆಂಗಳೂರು : ಮೈತ್ರಿ ಸರ್ಕಾರ ಪತನಾಗಿರುವ ಬೆನ್ನಲ್ಲೇ ಪಕ್ಷ ಸಂಘಟನೆಗೆ ಜೆಡಿಎಸ್ ಮುಂದಾಗಿದ್ದು, ಸರ್ಕಾರಕ್ಕೆ ಕೈಕೊಟ್ಟು ರಾಜೀನಾಮೆ ನೀಡಿರುವ ನಗರದ ಶಾಸಕರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕರನ್ನು ಆಯ್ಕೆ ಮಾಡಲು ಜೆಡಿಎಸ್ ವರಿಷ್ಠರು ಇಂದು ಚಾಲನೆ ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಅಧ್ಯಕ್ಷತೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ದೇವೇಗೌಡರು, ಮೈತ್ರಿ ಸರ್ಕಾರ ಪತನವಾಗಿರುವ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅತೃಪ್ತ ಶಾಸಕರ ತೀರ್ಮಾನ ಸ್ಪೀಕರ್ ಅವರು ಕೈಗೊಳ್ಳುತ್ತಾರೆ. ಜೊತೆಗೆ ಈ ಸಂಬಂಧದ ಕೇಸು ಸುಪ್ರೀಂಕೋರ್ಟ್ನಲ್ಲಿದೆ. ಅವರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಪಕ್ಷ ಸಂಘಟನೆಗೆ ಒತ್ತು ನೀಡುವ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಪಕ್ಷ ಸಂಘಟನೆ ಮಾಡುವ ಬಗ್ಗೆ ನೀವೇ ಸಲಹೆಗಳನ್ನು ನೀಡುವಂತೆ ಗೌಡರು ಮುಖಂಡರಿಗೆ ಮಾತನಾಡಲು ಅವಕಾಶ ಕೊಟ್ಟರು.
ಮೊದಲಿಗೆ ಆರ್.ಆರ್. ನಗರದ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಮಾತನಾಡಿ, ಎಲ್ಲ ಘಟಕಗಳನ್ನು ಬದಲಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಅನುವು ಮಾಡಬೇಕು. ಮುಂದಿನ ದಿನಗಳಲ್ಲಿ ವಿಧಾನಸಭೆ, ಬಿಬಿಎಂಪಿ ಚುನಾವಣೆ ಬರುತ್ತದೆ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಹಲವಾರು ಮುಖಂಡರು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನದ ಕುರಿತು ಮಾತನಾಡಿ, ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ, ಮುಖಂಡರಾದ ನಬಿ, ನಗರ ಮಹಿಳಾ ಘಟಕದ ಅಧ್ಯಕ್ಷೆ ರೂತ್ ಮನೋರಾಮ, ನಗರ ಘಟಕದ ಅಧ್ಯಕ್ಷ ಪ್ರಕಾಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇಂದು ಮಧ್ಯಾಹ್ನ ಕೆ.ಆರ್.ಪುರ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಉಪ ಚುನಾವಣೆ ಎದುರಾದರೆ ನಾಲ್ಕು ಕ್ಷೇತ್ರಗಳಿಗೆ ಪರ್ಯಾಯ ನಾಯಕರ ಆಯ್ಕೆ, ಚುನಾವಣೆ ಸಿದ್ಧತೆ ಕುರಿತು ಸಭೆಯಲ್ಲಿ ಗೌಡರು ಚರ್ಚೆ ನಡೆಸಲಿದ್ದಾರೆ.