ಬೆಂಗಳೂರು : ಹಳೆ ಮೈಸೂರು ಭಾಗದಲ್ಲಿ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ನಮ್ಮ ಶಕ್ತಿ ಇಲ್ಲ ಎಂದು ವಿರೋಧಿಗಳು ಹೇಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಕನಿಷ್ಟ 35 ಸ್ಥಾನ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಬಂದು ನಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡಿರುವ ಬಗ್ಗೆ ಈಗಾಗಲೇ ಹೇಳಿದ್ದೇನೆ. ಇನ್ನು, ಅಮಿತ್ ಶಾ ಅವರು ಜೆಡಿಎಸ್ ಪಕ್ಷದ 35 ಸೀಟುಗಳನ್ನು ನೆಲಕಚ್ಚಿಸುವುದಾಗಿ ಹೇಳಿದ್ದಾರೆ. ಕೊನೆ ಪಕ್ಷ ನಮಗೆ ಅಷ್ಟು ಸೀಟು ಇದೆ ಎಂದು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಅವರಿಗೆ ನಾನು ಆಭಾರಿ. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರುವುದು ನಮ್ಮ ಗುರಿ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಬಹುತೇಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ : ಇನ್ನು ಬಿಜೆಪಿ, ಕಾಂಗ್ರೆಸ್ ರೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರ ಮಾಡಿಕೊಂಡು ಹೋಗುತ್ತಿಲ್ಲ. ಪಂಚರತ್ನ ನಮ್ಮ ಕಾರ್ಯಕ್ರಮ ಮಾತ್ರ. ಜನರಿಗೆ ಅದನ್ನು ಮಾತ್ರ ಹೇಳುತ್ತೇವೆ. ಈಗಾಗಲೇ ಪಂಚರತ್ನ ರಥಯಾತ್ರೆಯ ಮೊದಲ ಹಂತದ ಯಾತ್ರೆಗೆ ಜನರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. 34 ದಿನಗಳ 34 ಕ್ಷೇತ್ರಗಳ ರಥಯಾತ್ರೆಯಲ್ಲಿ ಬಹುತೇಕ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2ನೇ ಹಂತದ ಪಂಚರತ್ನ ರಥಯಾತ್ರೆ : ನಾಳೆಯಿಂದ ಎರಡನೇ ಹಂತದ ಪಂಚರತ್ನ ರಥಯಾತ್ರೆ ಬೀದರ್ ಜಿಲ್ಲೆಯಿಂದ ಪ್ರಾರಂಭ ಆಗಲಿದೆ. ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರಗಿಯಲ್ಲಿ ರಥಯಾತ್ರೆ ಜನವರಿ 13ನೇ ತಾರೀಕಿನವರೆಗೆ ನಡೆಯಲಿದೆ. ಬೀದರ್ ಜಿಲ್ಲೆಯಲ್ಲಿ 4 ದಿನ ಹಾಗೂ ಕಲಬುರಗಿ ಜಿಲ್ಲೆಯಲ್ಲಿ 5 ದಿನ ರಥಯಾತ್ರೆ ನಡೆಯಲಿದೆ. ಇನ್ನು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14,15, 16ರಂದು ವಿರಾಮ ಇರಲಿದೆ.
ಜನವರಿ 17ರಿಂದ ಇಂಡಿ ವಿಧಾನಸಭೆ ಕ್ಷೇತ್ರದಿಂದ ಮತ್ತೆ ರಥಯಾತ್ರೆ ಶುರು ಆಗಲಿದೆ. ಅದು ಕ್ರಮವಾಗಿ ರಾಯಚೂರು, ಕೊಪ್ಪಳ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆಯಲಿದೆ. ಈ ಕುರಿತ ವೇಳಾ ಪಟ್ಟಿಯನ್ನು ಮುಂದೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಾರಗಳು ಅಚ್ಚರಿ ತಂದಿವೆ : ಮೊದಲ ಹಂತದ ಪಂಚರತ್ನ ರಥಯಾತ್ರೆಯಲ್ಲಿ ಬೃಹತ್ ಹಾರಗಳ ಮೂಲಕ ನನ್ನನ್ನು ಜನತೆ ಹಾಗೂ ಕಾರ್ಯಕರ್ತ ಬಂಧುಗಳು ಸ್ವಾಗತಿಸಿದ ರೀತಿ ಕಂಡು ನನಗೆ ಆಶ್ಚರ್ಯವಾಗಿದೆ. ಅನೇಕ ಕಡೆ ಹೆಲಿಕಾಪ್ಟರ್ ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು. ಇದು ನನ್ನನ್ನು ಚಕಿತಗೊಳಿಸಿತು. ಮೊದಲು 2018 ರಲ್ಲಿ ಇಂಡಿಯಲ್ಲಿ ಸೇಬು ಹಾರ ಹಾಕಿದ್ದರು. ನಂತರ ಕೆಲ ಕಾಲ ಅಂತಹ ಹಾರಗಳನ್ನು ಹಾಕುವುದು ನಿಂತಿತ್ತು. ಈಗ ಹಳ್ಳಿಭಾಗದ ರೈತರು ಅವರು ಬೆಳೆದ ಬೆಳೆಯನ್ನೇ ಹಾರ ಮಾಡಿ ಹಾಕಿದ್ದಾರೆ. ತುಮಕೂರಿನ ಹುಲಿಕೆರೆಯಲ್ಲಿ ರುದ್ರಾಕ್ಷಿ ಹಾರ ಹಾಕಿದ್ದರು. ಆ ಹಾರವನ್ನು ಪರಮಪೂಜ್ಯ ಶ್ರೀ ಡಾ. ಶಿವಕುಮಾರ ಮಹಾ ಸ್ವಾಮೀಜಿ ಅವರಿಗೆ ಸಮರ್ಪಣೆ ಮಾಡಿದ್ದೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ : ಹೈಕಮಾಂಡ್ ಕಪಿಮುಷ್ಠಿಯಲ್ಲಿ ಆಳ್ವಿಕೆ ನಡೆಸಿದ್ದು ಮನಮೋಹನ್ ಸಿಂಗ್: ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್