ಬೆಂಗಳೂರು: ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಈ ಬಗ್ಗೆ ಯಾರೂ ನಿರಾಶರಾಗಬೇಕಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೌಡರು, 'ಸೋಲು-ಗೆಲುವು ಅಂತಾ ನೋಡಿ ಕುಳಿತುಕೊಳ್ಳಲು ಆಗಲ್ಲ. ಸೋಲು-ಗೆಲುವು, ಸಿಹಿ-ಕಹಿ ಎಲ್ಲವನ್ನೂ ನೋಡಿದ್ದೇವೆ' ಎಂದರು.
'ಇನ್ನು ಮುಂದೆ ಸದಸ್ಯತ್ವ ನೋಂದಣಿ ಬಗ್ಗೆ ಗಮನ ಕೊಡುತ್ತೇವೆ. ಪಕ್ಷ ಕಟ್ಟುವ ಕಡೆ ಹೆಚ್ಚು ಗಮನ ನಮ್ಮದು. ನಾನು ಮತ್ತು ಪಕ್ಷದ ಎಲ್ಲಾ ನಾಯಕರು ಒಳಗೊಂಡಂತೆ ಈ ಕಾರ್ಯಕ್ಕೆ ಆದ್ಯತೆ ಕೊಡುತ್ತೇವೆ. ಐಕ್ಯತೆಯಿಂದ ಪಕ್ಷ ಸಂಘಟನೆ ಮಾಡುತ್ತೇವೆ' ಎಂದು ಗೌಡರು ತಿಳಿಸಿದರು.
ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸೀಟ್ ಬರುತ್ತದೆಂದು ಲೆಕ್ಕ ಹಾಕಿರಲಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅಲ್ಲಿಗೆ ಹೋಗಿ ಸ್ಥಳೀಯ ಮುಖಂಡರನ್ನು ಸೇರಿಸಿ ಸಭೆ ಮಾಡಿದ್ದರು. 15 ಸೀಟು ಗೆಲ್ಲುತ್ತೇವೆ ಅಂತ ಅಂದುಕೊಂಡಿದ್ದರು ಎಂದರು.
'ನಾವು ಎಲ್ಲಿಯೂ ಇಲ್ಲವೇ ಇಲ್ಲ ಅನ್ನುವ ಸ್ಥಿತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಯಲ್ಲಿ ನಮ್ಮ ಸ್ಥಿತಿ ಚೆನ್ನಾಗಿ ಇರಲಿಲ್ಲ. ಅಲ್ಲಿ ಬಿಜೆಪಿ ಸ್ವೀಪ್ ಮಾಡಿದೆ, ಕಾಂಗ್ರೆಸ್ ಬಗ್ಗೆ ಮಾತನಾಡಲು ಹೋಗಲ್ಲ. ಹುಬ್ಬಳ್ಳಿ-ಧಾರವಾಡದಲ್ಲಿ ಮೂರು-ನಾಲ್ಕು ಸೀಟ್ ನಿರೀಕ್ಷೆ ಮಾಡಿದ್ದೆವು. ಒಂದು ಸೀಟ್ ಬಂದಿದೆ. ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ಕಡೆ ಪೈಪೋಟಿ ಕೊಟ್ಟಿದ್ದೇವೆ' ಅನ್ನೋದು ಗೌಡರ ಮಾತು.
ಇದನ್ನೂ ಓದಿ: ಮಹಾನಗರ ಪಾಲಿಕೆಗಳ ಫಲಿತಾಂಶ.. ಮತ್ತೆ ಆರಂಭವಾಗಲಿದೆಯೇ ಬಿಜೆಪಿ-ಜೆಡಿಎಸ್ ಮೈತ್ರಿ ಯುಗ?