ಬೆಂಗಳೂರು: ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ಜಲ ವಿವಾದದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಕಾವೇರಿ ನೀರು ಹರಿಸಲು ತೀರ್ಪು ಬಂದಿರುವುದಕ್ಕೆ ಸುಪ್ರೀಂ ಕೋರ್ಟ್ ಅನ್ನು ದೂರುವುದಿಲ್ಲ, ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದರು.
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಪ್ರಧಾನಿಗಳ ಗಮನಕ್ಕೆ ತಂದಿರುವ ವಾಸ್ತವಾಂಶಗಳ ಆಧಾರದಡಿ ಕೇಂದ್ರ ಸರ್ಕಾರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್ಗೆ ಒಂದು ಅರ್ಜಿ ಹಾಕಿಸಬೇಕು. ಅವರಿಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ನಿಷ್ಪಕ್ಷಪಾತವಾದ ತಜ್ಞರ ಸಮಿತಿಯನ್ನು ಕಳುಹಿಸಿ ಎಲ್ಲಾ ಜಲಾಶಯಗಳ ಪರಿಶೀಲನೆ ಮಾಡಿ ನೀರು ಬಿಡಲು ಸಾಧ್ಯವಾ? ಬೆಳೆ ಸ್ಥಿತಿಗತಿ ಏನು? ಯಾವ ಯಾವ ಜಲಾಶಯಗಳಲ್ಲಿ ಎಷ್ಟು ನೀರಿದೆ? ಎಂಬುದನ್ನು ಅರಿತುಕೊಳ್ಳಬೇಕು. ಈಗಾಗಲೇ ಅನ್ಯಾಯ ಆಗೋಗಿದೆ. ಮುಂದಾದರೂ ಆಗುವ ಅನ್ಯಾಯವನ್ನು ತಡೆಗಟ್ಟಲು ಜಲ ಶಕ್ತಿ ಇಲಾಖೆಗೆ ಹೇಳಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ತಜ್ಞರ ಸಮಿತಿಯನ್ನು ಕಳುಹಿಸಲು ನಿವೇದನೆ ಮಾಡಬೇಕು ಎಂದು ಪ್ರಧಾನಿಗೆ ಪ್ರಾರ್ಥನೆ ಮಾಡುತ್ತೇನೆ ಎಂದರು.
ನಾಳೆ ಬೆಂಗಳೂರು ಬಂದ್ ಕರೆ ನೀಡಲಾಗಿದೆ. ಮಂಡ್ಯ, ಮೈಸೂರು ಹೀಗೆ ಹಲವಾರು ಕಡೆ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುತ್ತಾ ಕೆಆರ್‌ಎಸ್ ಜಲಾಶಯದ ಬರಿದಾದ ಒಣಗಿದ ಭೂಮಿ ಕಾಣುವ ಫೋಟೋ ಪ್ರದರ್ಶನ ಮಾಡಿ ಕಾವೇರಿ ಪ್ರಚಾರದ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ದಯಮಾಡಿ ಕೆಆರ್‌ಎಸ್ ಜಲಾಶಯದ ವಸ್ತುಸ್ಥಿತಿಯನ್ನು ಪ್ರತಿಬಿಂಬಿಸುವ ಈ ಫೋಟೋವನ್ನು ಪ್ರಸಾರ ಮಾಡಿ ಪ್ರಧಾನಿಯವರಿಗೆ ತಲುಪುವಂತೆ ಮಾಡಿ ಎಂದು ಕಳಕಳಿಯಿಂದ ದೇವೇಗೌಡರು ಮನವಿ ಮಾಡಿದರು.
ತಮಿಳರು ಕೂಡ ನಮ್ಮ ಅಣ್ಣತಮ್ಮಂದಿರೇ, ನಾವೂ ಬದುಕಬೇಕು ಅವರೂ ಬದುಕಬೇಕು. ನಾನು ರಾಜ್ಯಸಭೆಯಲ್ಲಿ ಮಾತನಾಡುವಾಗ ಐವರ ನಿಯೋಗವನ್ನು ಕಳುಹಿಸಿಕೊಡಿ ಎಂದೆ. ತಮಿಳು ಜನರು ಬೇಡ, ಕರ್ನಾಟಕದ ಜನರೂ ಬೇಡ. ಹೊರ ರಾಜ್ಯದಿಂದ ತಜ್ಞರನ್ನು ಕಳುಹಿಸಿಕೊಡಿ. ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಿ. ಯಾವ ಯಾವ ಜಲಾಶಯಗಳಲ್ಲಿ ಎಷ್ಟು ನೀರಿದೆ, ಯಾವ ಯಾವ ಜಲಾಶಯಗಳ ಹಿಂಭಾಗದಲ್ಲಿ ಹಾಲಿ ಅಚ್ಚುಕಟ್ಟು ಬೆಳೆ ಎಷ್ಟು ಒಣಗಿ ಹೋಗಿದೆ ಎಂಬುದನ್ನೆಲ್ಲಾ ನೋಡಿಕೊಂಡು ಬಂದು ವರದಿ ಮಾಡಿ ಎಂದು ಉಪರಾಷ್ಟ್ರಪತಿಗಳಿಗೆ ಮನವಿ ಮಾಡಿ ಕೈಜೋಡಿಸಿ ಕೇಳಿಕೊಂಡೆ. ಆದರೆ ತಮಿಳುನಾಡಿನ ಪ್ರತಿನಿಧಿಗಳು ಅಡ್ಡ ನಿಂತರು. ಹೀಗಾದಾಗ ಸಭಾಪತಿಗಳು ಏನು ಮಾಡುತ್ತಾರೆ. ನಂತರ ಕೈನಡುಗುತ್ತಿದ್ದರೂ ನಾನು ಶಕ್ತಿಯೆಲ್ಲ ಒಗ್ಗೂಡಿಸಿಕೊಂಡು ಸದನದಲ್ಲಿ ಎದ್ದು ನಿಂತು ಮಾತನಾಡಿದ್ದೆ ಎಂದು ಗದ್ಗದಿತರಾದರು.
ಕಳೆದ 60 ವರ್ಷದಿಂದ ಕಾವೇರಿ ವಿಷಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಿಲುವಿನ ಕುರಿತು ಹೇಳಿಕೆ ನೀಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾತನಾಡುವುದಿಲ್ಲ. ಆದರೆ ನಮ್ಮ ನಾಡಿನ ಜನತೆಯ ಸಂಕಷ್ಟದ ಹಿನ್ನೆಲೆಯಲ್ಲಿ ನಮ್ಮ ಹೋರಾಟ ನಡೆಯಲಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಹೋರಾಟ ಮಾಡಿದ್ದೇವೆ, ಬಿಜೆಪಿ ಸರ್ಕಾರ ಇದ್ದಾಗಲೂ ಹೋರಾಟ ಮಾಡಿದ್ದೇವೆ. ಇದರಲ್ಲಿ ಯಾವುದೇ ದಾಕ್ಷಿಣ್ಯ ಇಲ್ಲ. ಇದರಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎನ್ನುವ ಬದಲಾಗಿ ತಮಿಳುನಾಡಿನ ರಾಜಕೀಯದ ಶಕ್ತಿಯನ್ನು ಬಳಸಿಕೊಳ್ಳುವುದಕ್ಕೋಸ್ಕರವಾಗಿ ಅವರ ಓಲೈಕೆ ಪ್ರಯತ್ನ ನಡೆದಿದೆ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಮ್ಮ ರಾಜ್ಯದವರೇ ನಾಲ್ವರು ಕೇಂದ್ರ ಸಚಿವರಾಗಿದ್ದರು. ಅಂದು ಯಾರಾದರೂ ಮಾತನಾಡಿದ್ದೀರಾ? ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಸ್ ಎಂ ಕೃಷ್ಣ, ಮುನಿಯಪ್ಪ ಇದ್ದರು. ನಾಲ್ವರು ಮಂತ್ರಿಗಳಿದ್ದರೂ ಒಬ್ಬರಾದರೂ ಕಾವೇರಿ ವಿಚಾರದಲ್ಲಿ ಮಾತನಾಡಿದ್ದೀರಾ? ಮತ್ತೊಂದು ಕಡೆ 18 ಸಂಸದರು ಬಿಜೆಪಿಯಿಂದ ಇದ್ದರು. ಆಗ ನಾನು ಅನಂತ್ ಕುಮಾರ್ಗೆ ಕೇಳಿದೆ, ದಯಮಾಡಿ ಕಾವೇರಿ ವಿಚಾರದಲ್ಲಿ ನಮಗೆ ಸಹಕಾರ ಮಾಡಿ, ನಮ್ಮ ನೀರನ್ನು ಉಳಿಸಿಕೊಳ್ಳೋಣ ಎಂದಿದ್ದೆ. ಆದರೆ ಅವರಿಂದಲೂ ಸಹಕಾರ ಸಿಕ್ಕಿರಲಿಲ್ಲ. ಇದು ನಿನ್ನೆ ಮೊನ್ನೆಯ ವಿಷಯವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ಹತ್ತು ಸಾವಿರ ಕ್ಯೂಸೆಕ್ ನೀರು ಬಿಡಿ ಎಂದರು, ನಂತರ ಎರಡನೇ ಬಾರಿ 5000 ಕ್ಯೂಸೆಕ್ ನೀರು ಬಿಡಿ ಎಂದರು. ಎಂತಹ ದೌರ್ಭಾಗ್ಯ ನಮ್ಮದು. ಇದರಲ್ಲಿ ನಾನು ಸುಪ್ರೀಂ ಕೋರ್ಟ್ನ ದೂರಲ್ಲ, ಇದು ರಾಜ್ಯ ಸರ್ಕಾರದ ವೈಫಲ್ಯ. 40 ಲಕ್ಷ ಹೆಕ್ಟೇರ್ ಭೂಮಿ ಬೆಳೆದಿದೆ, ಫಸಲು ಇದೆ. ಆದರೆ ಅದಕ್ಕೆ ನೀರು ಕೊಡಲಾಗದ ಸ್ಥಿತಿ ಇದೆ. ಇದನ್ನೇ ನಾನು ರಾಜ್ಯಸಭೆಯಲ್ಲಿ ನಿಂತು ಮೂರನೇ ವ್ಯಕ್ತಿಗಳ ನಿಯೋಗ ಕಳುಹಿಸಿಕೊಡಿ, ನಮ್ಮ ಸಂಕಷ್ಟ ನೋಡಿ ಎಂದು ಕಣ್ಣೀರು ಹಾಕಿದ್ದೆ ಎಂದರು.
ಈ ಪಕ್ಷ ಇರುವುದು ಕೇವಲ ಅಧಿಕಾರಕ್ಕೆ ಮಾತ್ರ ಅಲ್ಲ, ನನ್ನ ರಾಜ್ಯದ ಜನರನ್ನು ಉಳಿಸುವುದಕ್ಕಾಗಿ ಇದೆ. 91ನೇ ವರ್ಷದ ವಯಸ್ಸಿನಲ್ಲಿಯೂ ನನಗೆ ಕಾವೇರಿ ಹಿನ್ನಡೆ ತಡೆಯಲಾಗಲಿಲ್ಲ. ಒಂದು ಕಡೆ ಆಂಧ್ರ, ಗೋವಾ, ಮಹಾರಾಷ್ಟ್ರ ಮತ್ತೊಂದು ಕಡೆ ಕೇರಳ, ತಮಿಳುನಾಡು, ಪಾಂಡಿಚೇರಿಯೂ ಇದೆ. ಸುತ್ತಮುತ್ತಲಿನ ರಾಜ್ಯಗಳ ನಡುವೆ ಜಲ ವ್ಯಾಜ್ಯ ಇದೆ. ಇದನ್ನು ನಿಭಾಯಿಸುವ ಇಚ್ಛಾಶಕ್ತಿ ಕೊರತೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಜಲಾಶಯ ಬರಿದಾಗಿರುವ ವಿಷಯವನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡನೆ ಮಾಡಲು ಕುಮಾರಸ್ವಾಮಿ ಸ್ಥಳ ಪರಿಶೋಧನೆ ಮಾಡಬೇಕಿತ್ತಾ? ಏನಾಗಿದೆ ನಿಮ್ಮ ಇಲಾಖೆಗೆ? ನಿಮ್ಮ ಅಧಿಕಾರಿಗಳು ಏನಾಗಿದ್ದಾರೆ? ಎಂದು ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ, ಕುಮಾರಸ್ವಾಮಿ ಸ್ಥಳ ಪರಿಶೀಲನೆ ಮಾಡಿದ ನಂತರ ಕೇವಲ ಎರಡು ಗಂಟೆಯಲ್ಲಿ ನಾನು ಪ್ರಧಾನಿಗೆ ಪತ್ರ ಬರೆದೆ. ತಮಿಳುನಾಡಿಗೆ ಮಾನ್ಸೂನ್ ಯಾವ ರೀತಿ ಬರುತ್ತದೆ, ನಮಗೆ ಯಾವ ರೀತಿ ಬರುತ್ತಿದೆ ಎಲ್ಲವನ್ನು ತಿಳಿಸಿದ್ದೇನೆ. ತಮಿಳುನಾಡಿನವರು ಮೂರು ಬೆಳೆ ಬೆಳೆಯುತ್ತಾರೆ. ಆದರೆ, ನಾವು ಒಂದು ಬೆಳೆ ಬೆಳೆಯುತ್ತೇವೆ, ನಾವು ಅರೆ ಕುಷ್ಕಿ ಬೆಳೆಯುತ್ತೇವೆ, ಕೇವಲ ಭತ್ತ ಮಾತ್ರ ಬೆಳೆಯುವುದಿಲ್ಲ. ಹಿಂದಿನ ಆದೇಶಗಳು, ವಸ್ತುಸ್ಥಿತಿ ಎಲ್ಲವನ್ನೂ ವಿವರಿಸಿದ್ದೇನೆ ಎಂದರು.
ನಮ್ಮ ಪಕ್ಷದ ಪರವಾಗಿ ಕುಮಾರಸ್ವಾಮಿ ಸರ್ವ ಪಕ್ಷ ಸಭೆಯಲ್ಲಿ ನಮ್ಮ ಸಲಹೆ ನೀಡಿದರು. ಆದರೆ ಅದಕ್ಕೆ ಅವರು ಕೊಟ್ಟ ಗೌರವ ಏನು ಹಾಗಾಗಿ ಮತ್ತೆ ರಾಜ್ಯ ಸರ್ಕಾರಕ್ಕೆ ನಮ್ಮ ಪಕ್ಷ ಸಲಹೆ ಕೊಡಲ್ಲ ಎಂದರು. ಹಿಂದೆ ಮನಮೋಹನ್ ಸಿಂಗ್ಗೆ ಕಾವೇರಿ ವಿಚಾರದಲ್ಲಿ ಮನವಿ ಮಾಡಿದಾಗ ನಾನು ಸರ್ಕಾರವನ್ನು ಉಳಿಸಿಕೊಳ್ಳಬೇಕು. ಇನ್ನೂ ಒಂದು ವರ್ಷ ಸರ್ಕಾರ ನಡೆಸಬೇಕು. ಹಾಗಾಗಿ ನೀವು ನ್ಯಾಯಾಲಯದಲ್ಲಿ ಈ ಸಮಸ್ಯೆ ಪರಿಹರಿಸಿಕೊಳ್ಳಿ ಎಂದಿದ್ದರು. ನಾಲ್ವರು ರಾಜ್ಯದ ಮಂತ್ರಿಗಳು ಇದ್ದರು. ಆಗ ಇವರಿಗೆ ಕರ್ನಾಟಕ ನೆನಪಿಗೆ ಬರಲಿಲ್ಲ, ಯಾಕೆಂದರೆ ತಮಿಳುನಾಡಿನಲ್ಲಿ 40 ಸಂಸದರಿದ್ದರೆ ಕರ್ನಾಟಕದಲ್ಲಿ 28 ಮಾತ್ರ. ಹಾಗಾಗಿ ತಮಿಳುನಾಡಿನ ವಿರುದ್ಧ ಯಾರೂ ಮಾತನಾಡಲಿಲ್ಲ ಎಂದರು.
ನಾಳೆ ಬಂದ್ ನಡೆಯಲಿ, ಬಂದ್ ವಿಷಯದಲ್ಲಿ ಕುಮಾರಸ್ವಾಮಿ ಬೆಂಬಲ ಕೊಟ್ಟಿದ್ದಾರೆ. ಶಾಂತಿಯುತವಾಗಿ ಬಂದ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮನವಿ ಮಾಡಿದರು. ರಾಜಕೀಯವಾಗಿ ನಾವು ಎನ್ಡಿಎ ಸೇರುವ ನಿರ್ಧಾರ ಕೈಗೊಳ್ಳಲು ಕಾರಣ ಏನು ಎಂದು ಇನ್ನೆರಡು ದಿನ ಬಿಟ್ಟು ಮತ್ತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ. ಇಂದು ಕೇವಲ ಕಾವೇರಿ ವಿಚಾರಕ್ಕೆ ಸೀಮಿತವಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ಕಿಚ್ಚು: ಎರಡು ಬಣಗಳ ನಡುವೆ ಮೂಡದ ಒಮ್ಮತ... ನಾಳೆ ಬೆಂಗಳೂರು, ಸೆ.29ಕ್ಕೆ ಕರ್ನಾಟಕ ಬಂದ್