ಬೆಂಗಳೂರು : ಎರಡು ರಾಷ್ಟ್ರೀಯ ಪಕ್ಷಗಳು ಏನೇ ಕಸರತ್ತು ನಡೆಸಲಿ. ನಮ್ಮ ಪಕ್ಷದ 19 ಮಂದಿ ಶಾಸಕರು ಪಕ್ಷದ ನಿಷ್ಠೆ ಉಳ್ಳವರಾಗಿದ್ದು, ಯಾರೂ ಕೂಡ ಜೆಡಿಎಸ್ ಬಿಡುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಅವರು ಆಪರೇಷನ್ ಹಸ್ತ ಎಂಬ ಮಾತಿಗೆ ಪ್ರತಿ್ಕ್ರಿಯಿಸಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಶಾಸಕರು ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜೆಡಿಎಸ್ ಉಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಹಿರಿಯ ನಾಯಕ ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಮಾಡಿದ್ದೇವೆ. ಎಲ್ಲ ಜಿಲ್ಲೆಗಳಿಗೆ ಕಮಿಟಿ ಭೇಟಿ ಕೊಟ್ಟು ವರದಿ ನೀಡುತ್ತದೆ. ಎಲ್ಲೆಲ್ಲಿ ಬದಲಾವಣೆ ಆಗಬೇಕಿದೆ. ಅದನ್ನು ಜಾರಿ ಮಾಡುತ್ತೇವೆ. ಹಲವಾರು ಕಡೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬೇಕು ಅಂತ ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ಸೆಪ್ಟೆಂಬರ್ 1 ರಂದು ಕೋರ್ ಕಮಿಟಿ ಸಭೆ ನಡೆಸಿ ಸಮಾವೇಶದ ರೂಪುರೇಷ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ತಯಾರಿ: "ಲೋಕಸಭಾ ಕ್ಷೇತ್ರದ ಪುನರ್ ವಿಂಗಡಣೆ ಬಗ್ಗೆ ಚರ್ಚೆ ಆಗುತ್ತಿದೆ. ಜಿ. ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ತಯಾರಿ ಮಾಡ್ತಿದಾರೆ. ಬಿಬಿಎಂಪಿ ಚುನಾವಣೆಯ ಬಗ್ಗೆಯೂ ತಯಾರಿ ಮಾಡ್ತಿದಾರೆ. ಇನ್ನು ನಮ್ಮ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಯಾರು ಹೋಗ್ತಾರೆ. ಇಂಥವರು ಹೋಗ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ" ಎಂದು ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡರು ಹೇಳಿದ್ದಾರೆ.
ಪಕ್ಷದ ಕಚೇರಿ ಜೆ. ಪಿ ಭವನದಲ್ಲಿ ಇಂದು ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, "ಸೆಪ್ಟೆಂಬರ್ 10ರಂದು ನಗರದ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದ ಗೌಡರು, ಈ 91 ರ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಯಾರೂ ನನ್ನನ್ನು ಕೈಬಿಡಬೇಡಿ" ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
ಇದನ್ನೂ ಓದಿ: ಕುಮಾರಸ್ವಾಮಿಯವರ ಪೆನ್ ಡ್ರೈವ್ ಬಗ್ಗೆ ಲಘು ಮಾತು ಬೇಡ: ಹೆಚ್.ಡಿ.ದೇವೇಗೌಡ