ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸೆ.10 ರಂದು ಸಮಾವೇಶ ನಡೆಸುವ ಹಿನ್ನೆಲೆಯಲ್ಲಿ ಬುಧವಾರ ಜೆಡಿಎಸ್ ನಾಯಕರು ಮಹತ್ವದ ಸಭೆ ನಡೆಸಿದರು.
ಜೆಪಿ ನಗರದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಬುಧವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು, ಸಾ.ರಾ ಮಹೇಶ್, ಹೆಚ್.ಡಿ.ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಇವತ್ತು ದೇವೇಗೌಡ, ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲ ಶಾಸಕರು, ಜಿಲ್ಲಾ ಮುಖಂಡರು ಸಭೆ ಸೇರಿದ್ದೆವು. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 10 ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆ ಯಶಸ್ವಿ ಮಾಡಲು ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಮಾಡಿರುವ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಬೇಕು. ಎಲ್ಲ 28 ಲೋಕಸಭಾ ಕ್ಷೆತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯುವುದು. ಅವರ ಅಭಿಪ್ರಾಯ ಕೋರ್ ಕಮಿಟಿಗೆ ನೀಡಿ ಅಭ್ಯರ್ಥಿ ಅಂತಿಮ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಪ್ರಮುಖರು ಮಾತಾಡಿದರು. ಜನತಾದಳ ಒಡೆಯುತ್ತಿದೆ ಎಂಬುದು ಸುಳ್ಳು. ಆ ರೀತಿ ಯಾವುದೂ ಆಗಲ್ಲ. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ಮುಂದಿನ ತಿಂಗಳು ಅವರೂ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಕಾವೇರಿಗೆ ಜೆಡಿಎಸ್ ಪ್ರಮುಖ ನಾಯಕರು ಹೋರಾಟ ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಸಮಸ್ಯೆ ಬಗ್ಗೆ ಗೊತ್ತಾಗುತ್ತಿದೆಯಲ್ಲ. ರೈತರು ಮಾತನಾಡಲಿ ಎಂದು ಇಷ್ಟು ದಿನ ಬಿಟ್ಟಿದ್ದೆವು. ಮುಂದೆ ನಾವು ಮಾತನಾಡುತ್ತೇವೆ.
ಅದಕ್ಕೆ ಇಂದು ಸಭೆ ಸೇರಿದ್ದೆವು. ಕಾವೇರಿ ವಿಚಾರ ಕೂಡ ಚರ್ಚೆಯಾಗಿದೆ. ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಹೋರಾಟ ಕೂಡ ಮಾಡಲಾಗಿದೆ. ಅದರ ಸ್ವರೂಪ ಬಹಳ ದೊಡ್ಡದಾಗಿದೆ. ಕಾವೇರಿ ವಿಚಾರವಾಗಿ ಪ್ರಣಾಳಿಕೆ ಮಾಡಿದ್ದೆ ಜೆಡಿಎಸ್. ಸೆ. 10ರ ಸಮಾವೇಶದ ಬಳಿಕ ಹೋರಾಟ ಸ್ವರೂಪ ಸಿದ್ದಪಡಿಸುತ್ತೇವೆ. 19 ಸೀಟ್ ಪಡೆದಿದ್ದರೂ ನಾವೂ ಸೋತಿಲ್ಲ. ಜೆಡಿಎಸ್ ಇಲ್ಲದ ಕ್ಷೇತ್ರ ಇಲ್ಲ. ಲೋಕಸಭೆಗೆ ಅಭ್ಯರ್ಥಿ ಯಾರು ಅಂತ ಅಂತಿಮ ಮಾಡಿಲ್ಲ ಎಂದು ಇಬ್ರಾಹಿಂ ಮಾಹಿತಿ ನೀಡಿದರು.
ಸಿ.ಪಿ ಯೋಗೇಶ್ವರ್ ಜೆಡಿಎಸ್ ಜೊತೆಗಿನ ಮೈತ್ರಿಯಾಗಬೇಕು ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಅವರಿಗೆ ಹುಡುಗಿ ಖುಷಿಯಾಗಿರಬಹುದು. ಹುಡುಗಿ ಇಷ್ಟ ಆಗಿರಬೇಕು ಮಾತನಾಡಿದ್ದಾರೆ. ಅವರು ಅವರ ಇಚ್ಚೆ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮುಂದೆ ಏನಾಗಲಿದೆ ನೋಡೋಣ ಎಂದರು.
ಇದನ್ನೂ ಓದಿ : ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕಾದರೆ ಜೆಡಿಎಸ್ನೊಂದಿಗೆ ಮೈತ್ರಿ ಅಗತ್ಯವಿದೆ: ಸಿ ಪಿ ಯೋಗೇಶ್ವರ್