ಬೆಂಗಳೂರು: ನಾನು ಈ ಕ್ಷೇತ್ರದ ಮಗ ನಿಮ್ಮೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡೇ ಬೆಳೆದವನು. ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ. ಈ ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂದು ರಾಜರಾಜೇಶ್ವರಿ ನಗರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ ಆರ್ ನಗರ ವ್ಯಾಪ್ತಿಯ ಸಜ್ಜೆಪಾಳ್ಯದಲ್ಲಿ ಇಂದು ಸಂಜೆ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ, ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ. ಬಿಜೆಪಿ-ಕಾಂಗ್ರೆಸ್‌ನವರು ಎಷ್ಟೇ ಜನರನ್ನು ಜೆಡಿಎಸ್‌ನಿಂದ ಸೇರಿಸಿಕೊಂಡರು ನಮ್ಮ ಮೇಲೆ ಯಾವ ಪರಿಣಾಮ ಬೀರಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರೆಸೋಣ ಎಂದು ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದರು.
ಬೆಳಗಿನಿಂದಲೇ ಬಿರುಸಿನ ಪ್ರಚಾರ ನಡೆಸಿದ ಕೃಷ್ಣಮೂರ್ತಿ, ಬಿಇಎಂಎಲ್ ಲೇಔಟ್‌ನ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದಿನವಿಡೀ ಪ್ರೆಸ್ ಲೇಔಟ್ ಪಾರ್ಕ್, ಬಿಇಎಂಎಲ್ ಲೇಔಟ್, ಲಗ್ಗೆರೆ, ಕೊಟ್ಟಿಗೆಪಾಳ್ಯ ಹಾಗೂ ಜ್ಞಾನಭಾರತಿ ವಾರ್ಡ್‌ಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಮತಯಾಚಿಸಿದರು. ಅಭ್ಯರ್ಥಿಗೆ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.
ಆರ್ ಆರ್ ನಗರ ಗೆಲ್ಲಲು 50 ತಂಡ, 10 ಶಾಸಕರ ಉಸ್ತುವಾರಿ: ಮೂರು ಪಕ್ಷಗಳಿಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆರ್ ಆರ್ ನಗರ ಗೆಲ್ಲಲು ಜೆಡಿಎಸ್ ಕೂಡ ರಣತಂತ್ರ ರೂಪಿಸಿದೆ. ಒಟ್ಟು 50 ತಂಡಗಳನ್ನು ರಚಿಸಿರುವ ಜೆಡಿಎಸ್, ಪ್ರತಿ ತಂಡಕ್ಕೆ 10 ರಿಂದ 15 ಬೂತ್‌ಗಳ ಉಸ್ತುವಾರಿ ನೀಡಿದೆ. ಜೊತೆಗೆ 10 ಶಾಸಕರಿಗೆ ವಾರ್ಡ್‌ವಾರು ಉಸ್ತುವಾರಿ ನೀಡಲಾಗಿದೆ ಎಂದು ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಹೇಳಿದರು.
ಕೊರೊನಾ ವೈರಸ್ ಕಾರಣದಿಂದ ಅಬ್ಬರದ ಪ್ರಚಾರಕ್ಕೆ ಮಣೆ ಹಾಕದೇ ಪ್ರತಿ ಮತದಾರರನ್ನು ತಲುಪುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದ ಅವರು, ಶಾಸಕರು ಹಾಗೂ ನಾಯಕರಿಂದ ವಾರ್ಡ್‌ವಾರು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಮತಯಾಚಿಸಲಾಗುವುದು. ಬೆಂಗಳೂರು ಹಾಗೂ ರಾಜ್ಯಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿದ ಕೊಡುಗೆಯನ್ನು ಜನರಿಗೆ ತಲುಪಿಸಲಾಗುವುದು ಎಂದರು.