ಬೆಂಗಳೂರು: ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡವರಿಗೆ ಸಚಿವ ಎಸ್.ಟಿ. ಸೋಮಶೇಖರ್ ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಧಮ್ಕಿ ಹಾಕಿದ್ದಾರೆ ಎಂದು ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಆರೋಪಿಸಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿದ್ದರು. ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಸೇರಿ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನನ್ನ ಬಗ್ಗೆಯೂ ಅವರು ಅಪಪ್ರಚಾರ ಮಾಡಿದ್ದಾರೆ. 2000 ಇಸವಿಯಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡರು. 2008ರಲ್ಲಿ ಯಶವಂತಪುರ ಕ್ಷೇತ್ರದಲ್ಲಿಯೂ ಸೋಲನ್ನು ಅನುಭವಿಸಿದ್ದಾರೆ. ಬೇರೆಯವರ ಬಗ್ಗೆ ಮಾತನಾಡುವಾಗ ಪರಿಜ್ಞಾನ ಇರಬೇಕು ಎಂದು ಹೇಳಿದರು.
ಒಂದು ಬಾರಿಯಾದರೂ ಶಾಸಕರ ಮೇಲೆ ಚುನಾವಣೆ ಎದುರಿಸಿದ್ದಾರಾ? ಎಂದು ಪ್ರಶ್ನಿಸಿ ಐದು ವರ್ಷಕ್ಕೆ ಗಿರಾಕಿ ಬರುತ್ತಾನೆ ಎಂದು ನನ್ನ ಬಗ್ಗೆ ಮಾತನಾಡಿದ್ದಾರೆ. ಐದು ವರ್ಷ ಶಾಸಕರಾಗಿ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿಸಿಕೊಂಡರು, ದಾಖಲೆ ಇದ್ದರೂ ಕೂಡ ನಾವು ಒಂದು ಚಕಾರ ಎತ್ತಲಿಲ್ಲ ಯಾಕೆಂದರೆ ಅಭಿವೃದ್ಧಿ ಕೆಲಸ ಆಗಲಿ ಎಂದು ಸುಮ್ಮನೆ ಇದ್ದೆವು ಎಂದು ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿಡಿಎ ಅಧ್ಯಕ್ಷರಾಗಿ ಎಷ್ಟು ಹಗರಣ ಮಾಡಿದೀರಾ?, ಇವತ್ತು ನೀವು ಒಂದೂವರೆ ಲಕ್ಷ ಕುಕ್ಕರ್ ಹಂಚಿದ್ದೀರ, ಕಿಟ್ ಹಂಚಿದ್ದಿರಾ?. ಇದಕ್ಕೆ ನೂರಾರು ಕೋಟಿ ಹಣ ಖರ್ಚು ಆಗಿದೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಬಸ್ ವ್ಯವಸ್ಥೆ ಮಾಡಿದ್ದೀರಾ, ಒಂದು ತಲೆಗೆ 500 ರೂ. ಹಂಚಿದ್ದಿರಾ?. ಕೋಟಿ ಕೋಟಿ ಹಣ ಖರ್ಚು ಮಾಡ್ತಾ ಇದ್ದೀರಲ್ಲಾ?. ಇಷ್ಟೊಂದು ಹಣ ಎಲ್ಲಿಂದ ಬಂತು?. ನಂಗೆ ಐದು ವರ್ಷದ ಗಿರಾಕಿ ಅಂತೀರಲ್ಲಾ, ನನಗೆ ಯಾವ ಸರ್ಕಾರಿ ಕಾರ್ಯಕ್ರಮ ಇಲ್ಲ. ನಾನು ಶಾಸಕನಾದ ನಂತರ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ನಾನು ಚುನಾವಣೆಗೆ ಬರಲ್ಲ ಅಂತ ನಿಶ್ಚಿಂತೆಯಾಗಿ ಇದ್ರಿ. ಆದರೆ ನಾನೇ ಅಭ್ಯರ್ಥಿ ಅಂತ ಘೋಷಣೆ ನಂತರ ನಿದ್ದೆ ಬರ್ತಾ ಇಲ್ಲ ನಿಮಗೆ ಎಂದು ಜವರಾಯಿಗೌಡ ಲೇವಡಿ ಮಾಡಿದರು.
ಕಳಪೆ ಕಾಮಗಾರಿ ಮಾಡಿಕೊಂಡು ಓಡಾಡುತ್ತಿರುವ ನೀವು, ನಿಮ್ಮಲ್ಲೇ ಹುಳುಕು ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವುದಕ್ಕೆ ಏನು ನೈತಿಕತೆ ಇದೆ. ನಾನು ನನ್ನ ಸ್ವಂತ ಹಣದಲ್ಲಿ ಚುನಾವಣೆ ಮಾಡಿದ್ದೇನೆ. ನಿಮ್ಮ ಹಾಗೆ ಭ್ರಷ್ಟಾಚಾರದ, ಬಿಟ್ಟಿ ಹಣದಲ್ಲಿ ಚುನಾವಣೆ ಮಾಡಿಲ್ಲ. ನಾನು ನನ್ನ ಸ್ವಂತ ಹಣದಿಂದ ಚುನಾವಣೆ ಮಾಡ್ತೀನಿ ಎಂದು ಆಣೆ ಮಾಡಲಿ ಎಂದು ಸವಾಲು ಹಾಕಿದರು. ನಾನು ಮಂಡ್ಯ ಜಿಲ್ಲೆಯವನು, ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಧಮ್ಕಿ ಹಾಕುವುದು ಬಿಟ್ಟು ಕೆಲಸ ಮಾಡಿ ಎಂದು ಟೀಕಿಸಿದರು.
ಇದನ್ನೂ ಓದಿ: ಮೋಹನ್ ಲಿಂಬಿಕಾಯಿಗೆ ತಟ್ಟಿದ ಮೂಲ ಕಾಂಗ್ರೆಸ್ಸಿಗರ ವಿರೋಧದ ಬಿಸಿ