ಬೆಂಗಳೂರು: ನಿತ್ಯೋತ್ಸವ ಕವಿ ನಿಸಾರ್ ಅಹಮದ್ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿತ್ಯೋತ್ಸವದ ಮೂಲಕ ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರಿದ ಕನ್ನಡದ ಹಿರಿಯ ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಅಮೂಲ್ಯವಾದ ರತ್ನವೊಂದನ್ನು ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ:
ನಿತ್ಯೋತ್ಸವದ ಕವಿ ಪ್ರೊ. ಕೆ.ಎಸ್. ನಿಸಾರ್ ಅಹ್ಮದ್ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.
ಕಾಂಗ್ರೆಸ್ ನಾಯಕರ ಸಂತಾಪ:
ನಿತ್ಯೋತ್ಸವ ಕವಿ ಡಾ. ಕೆ.ಎಸ್. ನಿಸಾರ್ ಅಹ್ಮದ್ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಕವಿ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಯಾವ ಪಂಥ-ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ಚಚ್ಛಂದವಾಗಿ ಹಕ್ಕಿಯಂತೆ ಕಾವ್ಯಕಟ್ಟುತ್ತಾ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ಕಾಯ ಅಳಿದರೂ ಅವರ ಕಾವ್ಯದ ಮೂಲಕ ನಮ್ಮ ನೆನಪಲ್ಲಿ ಸದಾ ಜೀವಂತ. ನನ್ನ ಗೌರವಪೂರ್ಣ ಸಂತಾಪಗಳು ಎಂದಿದ್ದಾರೆ.
ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಸಂತಾಪ ಸೂಚಿಸಿದ್ದು, ಕೆ.ಎಸ್.ನಿಸಾರ್ ಅಹ್ಮದ್ ನಿಧನದಿಂದ ಸಾಹಿತ್ಯ ಲೋಕದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.