ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆಯೇ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿ, ಜೆಡಿಎಸ್ ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರ ಕೈಗೊಂಡರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ಭರಾಟೆಯಲ್ಲಿ ಹಿಂದೆ ಬಿದ್ದಿದೆ.
ಉಪಸಮರಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದ್ದು, ಬಿಜೆಪಿ ಬಿರುಸಿನ ಪ್ರಚಾರ ನಡೆಸುತ್ತಿದೆ. ದಿನನಿತ್ಯ ತನ್ನ ಘಟಾನುಘಟಿ ನಾಯಕರು ಎಸ್.ಟಿ.ಸೋಮಶೇಖರ್ ಪರ ಮತ ಪ್ರಚಾರಕ್ಕೆ ಫೀಲ್ಡಿಗೆ ಇಳಿಸುತ್ತಿದೆ. ಸಿಎಂ ಯಡಿಯೂರಪ್ಪ, ಆರ್.ಅಶೋಕ್, ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್ ಕಣಕ್ಕೆ ಇಳಿದಿದ್ದು, ಪ್ರತಿನಿತ್ಯ ಪ್ರಚಾರ ನಡೆಸುತ್ತಿದ್ದಾರೆ.
ಇತ್ತ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಅಗ್ರಗಣ್ಯ ನಾಯಕರನ್ನು ಕರೆಸಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಎರಡು ದಿನ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದು, ಉಳಿದಂತೆ ಪಕ್ಷದ ಶಾಸಕರೂ ಜವರಾಯಿಗೌಡರ ಪರ ಮತಬೇಟೆ ಮಾಡುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಕೈ ಅಭ್ಯರ್ಥಿ ಈಗಲೂ ಏಕಾಂಗಿ:
ಬಿಜೆಪಿ ಹಾಗೂ ಜೆಡಿಎಸ್ ಕೈಗೊಳ್ಳುತ್ತಿರುವ ಪ್ರಚಾರದ ಅಬ್ಬರ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಪ್ರಚಾರದಲ್ಲಿ ಕಾಣಿಸುತ್ತಿಲ್ಲ.ಮೊದಲಿನಿಂದಲೂ ಪಿ.ನಾಗರಾಜ್ ತಮ್ಮ ಬೆಂಬಲಿಗರ ಜೊತೆಗೂಡಿ ಮತಯಾಚನೆ ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಕ್ಷೇತ್ರದಲ್ಲಿ ಕಾಂಗ್ರೆಸ್ ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿದೆಯಾ ಎಂಬ ಅನುಮಾನ ಮೂಡಿದೆ.
ಯಶವಂತಪುರ ಕ್ಷೇತ್ರದತ್ತ ಕೈ ನಾಯಕರು ಅಸಡ್ಡೆ ತೋರುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಶವಂತಪುರ ಕ್ಷೇತ್ರದ ಪ್ರಚಾರದಲ್ಲಿ ಟಾಪ್ ಲೀಡರ್ಸ್ ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಇದಕ್ಕೆ ಕಾರಣವಾಗಿದೆ.
ಇಲ್ಲಿವರೆಗೆ ಸಿದ್ದರಾಮಯ್ಯ ಒಂದು ದಿನ ಪ್ರಚಾರದಲ್ಲಿ ಭಾಗಿಯಾಗಿದ್ದು,ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕ್ಷೇತ್ರದಲ್ಲಿ ನಾಮಕಾ ವಾಸ್ತೆ ಪ್ರಚಾರ ನಡೆಸಿದ್ದಾರೆ. ಇನ್ನುಳಿದ ಯಾವ ರಾಜ್ಯ ನಾಯಕರೂ ಯಶವಂತಪುರ ಕ್ಷೇತ್ರದತ್ತ ತಲೆ ಹಾಕಿಲ್ಲ. ಸ್ವತಃ ಉಪ ಚುನಾವಣೆ ಉಸ್ತುವಾರಿ ಶಾಸಕ ಎಂ.ಕೃಷ್ಣಪ್ಪ ಕೂಡ ಗಾಯಬ್ ಆಗಿದ್ದಾರೆ. ಜೆಡಿಎಸ್ ಜೊತೆಗಿನ ಒಳಒಪ್ಪಂದಿಂದ ಕಾಂಗ್ರೆಸ್ ಪ್ರಚಾರದತ್ತ ನಿರಾಸಕ್ತಿ ತೋರುತ್ತಿದೆ ಎಂಬ ಆರೋಪನೂ ಕೇಳಿ ಬರುತ್ತಿದೆ.