ಬೆಂಗಳೂರು: ಸಾರಿಗೆ ನಿಗಮಗಳ ಸಾಲ ಪಾವತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಹಾಗೂ ಇತರೆ ಗಣ್ಯರ ಹೆಲಿಕಾಪ್ಟರ್ ಓಡಾಟಕ್ಕಾಗಿ ಹೆಚ್ಚುವರಿ 30 ಕೋಟಿ ರೂ. ಸೇರಿದಂತೆ ರಾಜ್ಯ ಸರ್ಕಾರವು 11,267 ಕೋಟಿ ರೂ.ಗಳ ಮೂರನೇ ಹಾಗೂ ಅಂತಿಮ ಕಂತಿನ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಮುಖ್ಯಮಂತ್ರಿ ಪರವಾಗಿ ಸಚಿವ ಮಾಧುಸ್ವಾಮಿ ಮಂಡಿಸಿದ ಪೂರಕ ಅಂದಾಜುಗಳಲ್ಲಿ ವಿವಿಧ ಸಾರಿಗೆ ನಿಗಮಗಳ ಸಾಲ ಪಾವತಿಗೆ 1 ಸಾವಿರ ಕೋಟಿ ರೂ., ಕನಿಷ್ಠ ಬೆಂಬಲ ಬೆಲೆ ಆವರ್ತನಿಧಿಗೆ 1 ಸಾವಿರ ಕೋಟಿ ರೂ., ಮಠ ಮಾನ್ಯಗಳಿಗೆ 32 ಕೋಟಿ ರೂ. ಸೇರಿದಂತೆ ವಿವಿಧ ವೆಚ್ಚಗಳಿಗೆ ಪೂರಕ ಅಂದಾಜುಗಳನ್ನು ಪ್ರಸ್ತಾಪಿಸಲಾಗಿದೆ.
ಸಾಲ ಬಾಬ್ತು ಪಾವತಿಗೆ ಬಿಎಂಟಿಸಿಗೆ 300 ಕೋಟಿ ರೂ., ವಾಯುವ್ಯ ಸಾರಿಗೆ ನಿಗಮಕ್ಕೆ 400 ಕೋಟಿ ರೂ., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 75 ಕೋಟಿ ರೂ, ಕೆಎಸ್ಆರ್ಟಿಸಿಗೆ 225 ಕೋಟಿ ರೂ. ಸೇರಿದಂತೆ ಒಟ್ಟು 1 ಸಾವಿರ ಕೋಟಿ ರೂ. ನೀಡಲು ಪ್ರಸ್ತಾಪಿಸಲಾಗಿದೆ. ಸಾರಿಗೆ ಸಚಿವ, ವಸತಿ ಸಚಿವ, ಜವಳಿ ಸಚಿವ, ಬಾಗಲಕೋಟೆ ಹಾಗೂ ಕೋಲಾರ ಸಂಸದರ ಉಪಯೋಗಕ್ಕಾಗಿ 5 ಹೊಸ ಕಾರು ಖರೀದಿಗೆ 1.39 ಕೋಟಿ ರೂ. ಪಾವತಿಸಲು ಪೂರಕ ಅಂದಾಜುಗಳಲ್ಲಿ ಹಣ ಮೀಸಲಿಡಲಾಗಿದೆ.
ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಂಬಲ ಬೆಲೆ ಆಧಾರದ ಮೇಲೆ ಖರೀದಿಸಲು ಅನುವಾಗುವಂತೆ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಗೆ 1 ಸಾವಿರ ಕೋಟಿ ರೂ., ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಮಠ ಹಾಗೂ ದೇವಾಲಯಗಳಿಗೆ 32 ಕೋಟಿ ರೂ., ಬಳ್ಳಾರಿ ಉತ್ಸವಕ್ಕೆ 2 ಕೋಟಿ ರೂ., ಚಿಕ್ಕಬಳ್ಳಾಪುರ 2 ಕೋಟಿ ರೂ., ಕದಂಬೋತ್ಸವಕ್ಕೆ 2 ಕೋಟಿ ರೂ. ಹೆಚ್ಚುವರಿಯಾಗಿ ನೀಡಲು ಪೂರಕ ಅಂದಾಜು ಸಲ್ಲಿಸಲಾಗಿದೆ.
ಇಂಧನ ಇಲಾಖೆ ವ್ಯಾಪ್ತಿಯಲ್ಲಿ 2022ರ ಅಕ್ಟೋಬರ್‌ನಿಂದ 2023 ರ ಮಾರ್ಚ್‌ವರೆಗೆ ಇಂಧನ ಹೊಂದಾಣಿಕೆ ವೆಚ್ಚ ಪಾವತಿಗೆ 300 ಕೋಟಿ ರೂ. ಹೆಚ್ಚುವರಿ ಮೊತ್ತ, ಸಬ್ಸಿಡಿ ಬಾಕಿ ಮೊತ್ತ ಪಾವತಿಸಲು 1,600 ಕೋಟಿ ರೂ. ಸೇರಿದಂತೆ ಇಂಧನ ಇಲಾಖೆಗೆ 1,900 ಕೋಟಿ ರೂ. ಒದಗಿಸಲಾಗಿದೆ.
ನೀರಾವರಿ ಇಲಾಖೆ ಬಾಕಿ ಬಿಲ್ ಪಾವತಿಗೆ ಕೃಷ್ಣ ಭಾಗ್ಯ ಜಲ ನಿಗಮಕ್ಕೆ 400 ಕೋಟಿ ರೂ., ಕರ್ನಾಟಕ ನೀರಾವರಿ ನಿಗಮಕ್ಕೆ 700 ಕೋಟಿ ರೂ., ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 600 ಕೋಟಿ ರೂ., ಕಾವೇರಿ ನೀರಾವರಿ ನಿಗಮಕ್ಕೆ 300 ಕೋಟಿ ರೂ., ಕೆರೆಗಳ ಪ್ರಧಾನ ಕಾಮಗಾರಿಗಳ ಬಿಲ್ ಬಾಕಿ ಪಾವತಿಗೆ 30 ಕೋಟಿ ರೂ. ಮೀಸಲಿಡಲಾಗಿದೆ.
ಪೂರಕ ಅಂದಾಜುಗಳಲ್ಲಿ ಪ್ರಮುಖವಾಗಿ ಜಲಸಂಪನ್ಮೂಲ 2,550.00 ಕೋಟಿ ರೂ., ಧನ ಇಲಾಖೆ 1,900 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 1,503.81 ಕೋಟಿ ರೂ., ನಗರಾಭಿವೃದ್ಧಿ 1,355.00 ಕೋಟಿ ರೂ., ಒಡಾಳಿತ ಮತ್ತು ಸಾರಿಗೆ 1,050 ಕೋಟಿ ರೂ., ಮೂಲಭೂತ ಸೌಕರ್ಯ ಅಭಿವೃದ್ಧಿಗೆ 1,050 ಕೋಟಿ ರೂ., ಸಹಕಾರ 1,061.41 ಕೋಟಿ ರೂ., ಸಮಾಜ ಕಲ್ಯಾಣ 513.82 ಕೋಟಿ ರೂ. ಅನುದಾನ ಒದಗಿಸಲಾಗಿದೆ.