ಬೆಂಗಳೂರು: ಇತ್ತೀಚೆಗೆ ಮನೆ ಮನೆಗೆ ಮದ್ಯ ಪೂರೈಸುವ ಅಲೋಚನೆ ಇದೆಯೆಂದು ಹೇಳಿಕೆ ಕೊಟ್ಟು ಜನರಿಂದ ವಿರೋಧ ವ್ಯಕ್ತವಾದ ಕೂಡಲೇ ಯೂಟರ್ನ್ ಹೊಡೆದಿದ್ದ ಅಬಕಾರಿ ಸಚಿವ ಹೆಚ್.ನಾಗೇಶ್ ಅವರಿಗೆ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಟಾಂಗ್ ಕೊಟ್ಟಿದ್ದಾರೆ.
ಇಂದು, ಬಂಟರ ಸಂಘದಲ್ಲಿ ಮಾತನಾಡಿದ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಅಲೋಚನೆ ಕೇವಲ ಮಂತ್ರಿಗಳದ್ದು. ಅದು ಸರ್ಕಾರದ ಅಲೋಚನೆಯಅಲ್ಲ. ಮನೆ ಮನೆಗೆ ಮದ್ಯ ಸರಬರಾಜು ಮಾಡುವುದು ಬಹಳ ತಪ್ಪು. ಮನೆಗೆ ಮದ್ಯ ಕೊಡುವ ಬದಲು ಎಲ್ಲಾ ಅಂಗಡಿಗಳಲ್ಲಿ ಕೊಟ್ಟುಬಿಡಿ ಅಥವಾ ಮನೆ ಬಾಗಿಲಿಗೆ ಒಂದೊಂದು ವೈನ್ ಶಾಪ್ ಕೊಟ್ಟುಬಿಡಿ. ಅವರಿಗೆ ಖರೀದಿಸಲು ಸುಲಭವಾಗುತ್ತೆ ಎಂದು ಅಬಕಾರಿ ಸಚಿವರ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದ್ರು.
ನಗರ ಪ್ರದೇಶಗಳಲ್ಲಿ ಈಗಾಗಲೇ ಮಾಲ್ಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸುಮ್ಮನಿದ್ದರು ಹಳ್ಳಿಗಳಲ್ಲಿ ಮಹಿಳೆಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಹಾಗಾಗಿ ಇದು ಉತ್ತಮವಾದುದ್ದಲ್ಲ ಎಂದರು.