ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆ ವೈದ್ಯಕೀಯ ಉಪಕರಣಗಳು ಮತ್ತು ಔಷಧಿ ಖರೀದಿಯ ಕುರಿತಾದ ಎಲ್ಲಾ ಮಾಹಿತಿಯನ್ನು ಲೆಕ್ಕ ಪರಿಶೋಧಕರಿಗೆ ನೀಡಬಹುದು. ಆದರೆ, ಎಲ್ಲದಕ್ಕೂ ಸಮರ್ಥನೆ ನೀಡುವುದು ಸಾಧ್ಯವಿಲ್ಲ ಅಂತಾ ಪ್ರಧಾನ ಲೆಕ್ಕ ಪರಿಶೋಧಕರಿಗೆ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಪತ್ರ ಬರೆದಿದ್ದಾರೆ.
ಕರ್ನಾಟಕ ಸ್ಟೇಟ್ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್, ವೈದ್ಯಕೀಯ ಉಪಕರಣ ಖರೀದಿ ಮಾಡುತ್ತಿದೆ. ಖರೀದಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಸಭೆಯಲ್ಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್ ಕೆ ಪಾಟೀಲ್ ನೇತೃತ್ವದಲ್ಲಿ ವಿಶೇಷ ಲೆಕ್ಕ ಪರಿಶೋಧನೆಗೆ ನಿರ್ಧಾರ ಮಾಡಲಾಗಿತ್ತು.
ಆದರೆ, ಇದೀಗ ಆರೋಗ್ಯ ಇಲಾಖೆ ತಕರಾರು ಮಾಡುತ್ತಿದೆ. ವೈದ್ಯಕೀಯ ಸಲಕರಣೆಗಳ ಖರೀದಿ ಸರ್ಕಾರದ ನಿಯಮಗಳ ಅನುಸಾರ ನಡೆದಿದೆ ಅಂತಾ ಪತ್ರ ಬರೆದಿದ್ದಾರೆ.