ಬೆಂಗಳೂರು: ಇಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನಿವಾಸಕ್ಕೆ ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು.
ಒಕ್ಕಲಿಗ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ತಂತ್ರ ರೂಪಿಸಿರುವ ಜವರಾಯಿಗೌಡ, ತಮಗೆ ಬೆಂಬಲ ನೀಡುವಂತೆ ನಾರಾಯಣಗೌಡರ ಬಳಿ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ನನ್ನ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದರು. ನನ್ನ ಮಗನ ಮದುವೆ ವಿಷಯ ಹಾಗೂ ಮನೆ ಕಟ್ಟುವ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಯಶವಂತಪುರ ಕ್ಷೇತ್ರ ಅಂದರೆ ಒಕ್ಕಲಿಗರು ಮಾತ್ರವಲ್ಲ. ಇಲ್ಲಿ ಅಲ್ಪಸಂಖ್ಯಾತರು, ಲಿಂಗಾಯತರು, ಪರಿಶಿಷ್ಟ ಜಾತಿಯವರೂ ಇದ್ದಾರೆ. ಅವರೆಲ್ಲರಿಗೂ ನಾನು ಮತ ಕೇಳುತ್ತಿದ್ದೇನೆ. ಹಾಗಾಗಿ ಒಕ್ಕಲಿಗರು ಮಾತ್ರ ನಿರ್ಣಾಯಕರು ಅನ್ನೋದು ಸರಿಯಲ್ಲ ಎಂದರು. ನಮ್ಮದು ಜಾತ್ಯಾತೀತ ಪಕ್ಷ. ಜಾತಿ ಆಧಾರದಲ್ಲಿ ನಾವು ಚುನಾವಣೆ ನಡೆಸಲ್ಲ ಎಂದು ಹೇಳಿದರು.
ಸಿಎಂ ಬಿ.ಎಸ್.ಯಡಿಯೂರಪ್ಪನವರು ಕ್ಷೇತ್ರಕ್ಕೆ ಎಷ್ಟು ಬೇಕಾದರೂ ಅನುದಾನ ಕೊಡುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ತಮ್ಮ ಕೈಯಿಂದೇನು ಕೊಡುತ್ತಾರಾ? ಜನರು ಕಟ್ಟಿದ ಟ್ಯಾಕ್ಸ್ ಹಣವನ್ನು ಹೀಗೆ ಬೇಕಾಬಿಟ್ಟಿ ಹಂಚುವುದು ಎಷ್ಟು ಸರಿ ಎಂದು ಕಿಡಿಕಾರಿದರು. 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಮಾತ್ರ ಹೀಗೆ ₹ 750 ಕೋಟಿ ಕೊಡುತ್ತಿದ್ದು, ಉಳಿದ ಶಾಸಕರ ಕ್ಷೇತ್ರಗಳಿಗೆ ಯಾಕೆ ಕೊಡುತ್ತಿಲ್ಲ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯಶವಂತಪುರಕ್ಕೆ ₹ 480 ಕೋಟಿ ಕೊಟ್ಟಿದ್ದಾರೆ. ಆಗ ನಾನು ಶಾಸಕನಾಗಿರಲಿಲ್ಲ. ಕಾಂಗ್ರೆಸ್ನಲ್ಲಿದ್ದ ಸೋಮಶೇಖರ್ ಶಾಸಕರಾಗಿದ್ದರು. ಹಾಗಾಗಿ ನಾನು ಅಸಹಾಯಕನಾಗಿದ್ದೆ ಎಂದರು.
ಇನ್ನು ಈ ಕುರಿತಾಗಿ ಟಿ.ಎ.ನಾರಾಯಣಗೌಡ ಮಾತನಾಡಿ, ಇವತ್ತು ಜವರಾಯಿಗೌಡರು ಬಂದು ಉಪ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿದ್ದಾರೆ. ಅದರೆ ನಮ್ಮ ಸಂಘದ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಬೇಕು. ಹೀಗಾಗಿ ಅಲ್ಲಿ ಚರ್ಚಿಸಿ ನಾವು ಸಂವಿಧಾನ ಬದ್ಧವಾಗಿರುವ ವ್ಯಕ್ತಿಗೆ ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದರು.