ಬೆಂಗಳೂರು: ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನ ಕಾರ್ಯಕ್ರಮವನ್ನು ಕಾಂಗ್ರೆಸ್ ನಾಯಕರು ಆಚರಿಸಿದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಇತರ ಮುಖಂಡರು ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನೆಹರೂ ಆಧುನಿಕ ಭಾರತದ ಹರಿಕಾರರು. ಅದ್ರೆ ಆರ್ಎಸ್ಎಸ್ನವರು ಅವರನ್ನು ಯಾವತ್ತಿಗೂ ಒಪ್ಪಲಿಲ್ಲ. ಅವರ ಕೆಲಸಗಳನ್ನು ಸದಾ ಟೀಕಿಸುವುದೇ ಆಗಿತ್ತು. ಧರ್ಮವನ್ನು ಮುಂದೆ ತಂದು ದೇಶ ಇಬ್ಭಾಗ ಮಾಡಿದ್ದಾರೆ. ಅವರಿಗೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲ. ಇಲ್ಲಿಯವರೆಗೂ ಅವರ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿಲ್ಲ. ಆರ್ಎಸ್ಎಸ್ ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಆರ್ಎಸ್ಎಸ್ ವಿರುದ್ಧ ಹರಿಹಾಯ್ದರು.
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, 16ರಿಂದ 20 ಕ್ಷೇತ್ರಗಳಲ್ಲಿ ಮತ ಯಂತ್ರ ದುರುಪಯೋಗ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಮತ್ತೊಮ್ಮೆ ಸ್ವಾತಂತ್ರ್ಯ ಹೋರಾಟ ಅನಿವಾರ್ಯ. ಮತ ಯಂತ್ರ ದುರುಪಯೋಗ ಮಾಡಿಕೊಂಡು ಬಿಜೆಪಿ ಗೆಲ್ತಿದೆ. ಮತ ಯಂತ್ರ ಬದಲಿಸಿ ಬ್ಯಾಲೆಟ್ ಪೇಪರ್ ಮೇಲೆ ಚುನಾವಣೆ ನಡೆಯಲ್ಲ. ಹೋರಾಟ ಅನಿವಾರ್ಯ ಎಂದರು.
ನಾಯಕರ ಜುಗಲ್ ಬಂದಿ:
ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಹೆಚ್.ಮುನಿಯಪ್ಪ, ಡಿಕೆಶಿ ಜುಗಲ್ ಬಂದಿ ಕಂಡು ಬಂತು. ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುವಾಗ ಮಧ್ಯಪ್ರವೇಶ ಮಾಡಿದ ಕೆ.ಹೆಚ್.ಮುನಿಯಪ್ಪ ಆರ್ಎಸ್ಎಸ್ ನಾಯಕರ ಹೆಸರು ಹೇಳಿ ಎಂದರು. ನಾನು ಹೆಸರು ಹೇಳಿದ್ದೇನೆ, ನೀವು ಕೇಳಿಸಿಕೊಳ್ಳಲಿಲ್ಲ. ಗೋಳ್ವಾಳ್ಕರ್, ಆ ವೋಳ್ಕರ್ ಈ ವೋಳ್ಕರ್ ಸೇರಿ ಬ್ರಿಟಿಷರ ಪರ ಕೆಲಸ ಮಾಡಿದ್ರು. ಉದ್ಯೋಗ ತೆಗೆದುಕೊಳ್ಳಿ ಸ್ವಾತಂತ್ರ್ಯ ಹೋರಾಟ ಮಾಡಬೇಡಿ ಅಂತ ನಾಗಪುರ ಸೇರಿದಂತೆ ಹಲವು ಕಡೆ ಸಭೆ ನಡೆಸಿದ್ರು. ಇಂಥವರು ಇಂದು ದೇಶ ಭಕ್ತಿ ಬಗ್ಗೆ ನಮಗೆ ಹೇಳ್ತಾರೆ. ನೆಹರು ಮೂಢನಂಬಿಕೆ ಒಪ್ಪುತ್ತಿರಲಿಲ್ಲ. ಎಲ್ಲವೂ ವೈಜ್ಞಾನಿಕವಾಗಿ ಚಿಂತನೆ ಮಾಡಿದವರು ಡಿ.ಕೆ.ಶಿವಕುಮಾರ್ ಜೀ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟು ಇಲ್ಲ. ಒಗ್ಗಟ್ಟು ಇಲ್ಲ ಅಂದ್ರೆ ಕಾಂಗ್ರೆಸ್ಗೆ ಕಷ್ಟ. ಕಾಂಗ್ರೆಸ್ ಉಳಿಯಬೇಕಾದ್ರೆ ನೆಹರೂ ಮಾಡಿದ ಕೆಲಸ ಮರೆಯಬಾರದು. ಅವರು ಕೊಟ್ಟ ಕೊಡುಗೆ ಮರೆಯುವುದು ಬೇಡ. ಎಚ್ಚೆತ್ತುಕೊಂಡು ಕೆಲಸ ಮಾಡುವವರಿಗೂ ಕಾಂಗ್ರೆಸ್ನಲ್ಲಿ ಭವಿಷ್ಯ ಕಷ್ಟ ಇದೆ. ನಮ್ಮ ನಮ್ಮಲ್ಲಿಯೇ ಸಮಸ್ಯೆ ಇದೆ. ಇದನ್ನ ನಾವು ಮೊದಲು ಅರಿತುಕೊಂಡು ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಬೇಕು ಎಂದರು.
ಒಬಾಮಾ ವಿರುದ್ಧ ಕಿಡಿ:
ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮಾ ಟೀಕೆಗೆ ಖರ್ಗೆ ಕೆಂಡವಾದರು. ಒಬಾಮಾ ಯಾವುದೋ ಸಂದರ್ಭದಲ್ಲಿ ಬರ್ಕೊಂಡಿದ್ದಾರೆ. ಸಮಯ ಬಂದಾಗ ಅದಕ್ಕೆ ಉತ್ತರ ಕೊಡಲು ಬರುತ್ತೆ. ನಾವೇ ಬಂದು ಒಬಾಮಾ ಅವರು ರಾಹುಲ್ ಗಾಂಧಿ ಬಗ್ಗೆ ಹಿಂಗ್ ಅಂದಿದ್ದಾರೆ ಅಂತ ಮಾತಾಡ್ತೀವಿ. ಅದಲ್ಲ ಮಾತಾಡಬೇಕಾದ್ದು, ನಮ್ಮ ವಿಚಾರ ಜನರಿಗೆ ಹೇಳಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬೇಡಿ, ಸರ್ಕಾರಿ ನೌಕರಿಯಲ್ಲಿ ಸೇರಿ ಅಂತ ಆರ್ಎಸ್ಎಸ್ ಮುಖಂಡರು ಪಿತೂರಿ ಮಾಡಿದ್ದರು. ಗೋಳ್ವಾಳ್ಕರ್ ಹಾಗೂ ಸಾವರ್ಕರ್ ಈ ರೀತಿ ಪಿತೂರಿ ಮಾಡಿದ್ದರು. ಅವರಿಗೆ ದೇಶದ ಸ್ವಾತಂತ್ರ್ಯ ಬೇಕಾಗಿರಲಿಲ್ಲ. ಸರ್ಕಾರಿ ನೌಕರಿ ಬೇಕಿತ್ತು ಎಂದು ಗಂಭೀರ ಆರೋಪ ಮಾಡಿದರು.