ಬೆಂಗಳೂರು: ಇನ್ನು ಮುಂದೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ ಹಮ್ಮಿಕೊಂಡಿದ್ದ 'ಜನತಾ ಪತ್ರಿಕೆ 'ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪ ಚುನಾವಣೆ ಗೆಲುವು ಬೇರೆ, ಸಾಮಾನ್ಯ ಚುನಾವಣೆಯ ಗೆಲುವು ಬೇರೆ. ಮುಂದಿನ ಚುನಾವಣೆ ಅಷ್ಟೇ ನನ್ನ ಗುರಿ ಎಂದು ಹೇಳಿದರು.
ತುರ್ತು ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕರೆ ಕೊಟ್ಟಿದ್ದೇ ಜಯಪ್ರಕಾಶ್ ನಾರಾಯಣ್ ಅವರು. ಜನತಾ ಪಾರ್ಟಿ ಐದು ಪಕ್ಷಗಳು ಸೇರಿ ಚುನಾವಣೆ ಎದುರಿಸಲು ನಿಂತವು. ನಂತರ ಪಕ್ಷಗಳು ಒಡೆದು ಹೋದವು. ಜಯಪ್ರಕಾಶ್ ನಾರಾಯಣ್ ಅವರ ಕೆಲಸ ನೋಡಿ ಈ ಭವನಕ್ಕೆ ಅವರ ಹೆಸರು ಇಡಲಾಯ್ತು ಎಂದು ತಿಳಿಸಿದರು.
ಜನತಾ ಪತ್ರಿಕೆ ಪಕ್ಷದ ಮುಖವಾಣಿಯಲ್ಲ. ಜೆ.ಪಿ ಅವರ ಹೋರಾಟ, ದೇಶಕ್ಕೆ ಕೊಟ್ಟ ಕೊಡುಗೆಯೇ ಜನತಾ ಪತ್ರಿಕೆ. 15 ದಿನಗಳ ಹಿಂದೆ ನಾವು ಈ ಪತ್ರಿಕೆ ಬಿಡುಗಡೆಗೆ ಚಿಂತಿಸಿದ್ದೆವು. ನಾವು ಮಾಡಿದ ಏಳು ದಿನದ ಕಾರ್ಯಗಾರ ಜನರಿಗೆ ತಲುಪಿಲ್ಲ. ಇಡೀ ರಾಜ್ಯದ ದೇಶದ ಬೆಳವಣಿಗೆಗಳ ಬಗ್ಗೆ ಈ ಪತ್ರಿಕೆ ಇದೆ. ಏಳು ದಿನಗಳ ಕಾರ್ಯಗಾರ ಯಶಸ್ವಿಯಾಗಿ ಮಾಡಿದ್ದೇವೆ.
ಇಂದಿನಿಂದ 8 ದಿನ ಕಾರ್ಯಾಗಾರ ನಡೆಯಲಿದೆ. ನಿರಂತರವಾಗಿ ಪದಾಧಿಕಾರಿಗಳ ಸಭೆ ಆರಂಭವಾಗುತ್ತಿವೆ. ಬೇರೆ ರಾಜ್ಯದಲ್ಲಿ ಹಲವಾರು ಪಕ್ಷಗಳು ಅವರದ್ದೇ ಆದ ಪಕ್ಷದ ಕಾರ್ಯಕ್ರಮಗಳನ್ನು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸುತ್ತಿವೆ. ಅವರದ್ದೇ ಆದ ಪತ್ರಿಕೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಪತ್ರಿಕೆ ಲೋಕಾರ್ಪಣೆ ಮಾಡಲಾಗಿದೆ. ಇದು ಪಕ್ಷದ ಮುಖವಾಣಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
'ಪಕ್ಷ, ವ್ಯಕ್ತಿ ಟೀಕೆಗೆ ಅವಕಾಶ ಇಲ್ಲ':
ಈ ಪತ್ರಿಕೆ ಜನತಾ ದಳದ ಕಾರ್ಯಕ್ರಮಕ್ಕೆ ಸೀಮಿತವಾಗಲ್ಲ. ಎಲ್ಲಾ ಬೆಳವಣಿಗೆ ಕ್ರೂಢೀಕರಿಸಿ ಪ್ರಕಟಣೆ ಮಾಡುತ್ತೇವೆ. ರಾಜ್ಯದ ಯಾವುದೇ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಕಚೇರಿಗೆ ಕಳುಹಿಸಬಹುದು. ಅಂತಹ ಲೇಖನಗಳನ್ನು ನಾವು ಪ್ರಕಟಿಸುತ್ತೇವೆ.
ಟೀಕೆಯ ಲೇಖನಗಳು ಇಲ್ಲಿ ಇರೋದಿಲ್ಲ. ವಾಸ್ತವಾಂಶದ ಬಗ್ಗೆ ಬರೆಯಲಾಗುತ್ತದೆ. ಮಾನಹಾನಿಯಂತಹ ಲೇಖನ ಹಾಕುವುದಿಲ್ಲ. ನಾಡು, ದೇಶದ ಸಮಸ್ಯೆಗಳ ಬಗ್ಗೆ ಲೇಖನಗಳನ್ನು ಬರೆಯಲಾಗುತ್ತದೆ. ಸರ್ಕಾರದ ಲೋಪದೋಷಗಳನ್ನು ಸಾಮಾನ್ಯ ವ್ಯಕ್ತಿ ಬರೆದು ಕಳುಹಿಸಿದರೂ ನಾವು ಪ್ರಕಟ ಮಾಡುತ್ತೇವೆ ಎಂದು ಹೇಳಿದರು.
'ಪೆಟ್ರೋಲ್ ದರದ ಬಗ್ಗೆ ಜನ ತಲೆಕೆಡಿಸಿಕೊಳ್ಳುತ್ತಿಲ್ಲ':
ಪೆಟ್ರೋಲ್ ದರ ಏರಿಕೆಯಾಯ್ತು ಅಂತ ನಾವು ಟೀಕೆ ಮಾಡ್ತಾ ಇದ್ದೇವೆ. ಒಂದು ವರ್ಗದಲ್ಲಿ ಹಣ ಇದೆ, ಇನ್ನೊಂದು ವರ್ಗದಲ್ಲಿ ಎರಡು ಹೊತ್ತಿನ ಊಟಕ್ಕೂ ಇಲ್ಲದಂತಾಗಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ನಿಜವಾದ ದೇಶ, ರಾಜ್ಯದ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು.
ಈ ಪತ್ರಿಕೆಯಲ್ಲಿ ಗುಣಾತ್ಮಕತೆ ಇದೆ ಅನ್ನುವುದನ್ನು ತೋರಿಸುತ್ತೇವೆ. ಇದು ಕಾರ್ಯಕರ್ತರ ಜವಾಬ್ದಾರಿ ಕೂಡ ಹೌದು. ನೀರಾವರಿ ಯೋಜನೆ ಕುರಿತು ಪಾದಯಾತ್ರೆ ಬಗ್ಗೆ ಎರಡು ತಿಂಗಳ ಹಿಂದೆಯೇ ಚರ್ಚೆ ಮಾಡಿದ್ವಿ. ಮನವಿಯನ್ನೂ ಕೂಡ ಮಾಡಿದ್ವಿ. ಸಿಎಂ ಅವರಿಗೂ ಮನವಿ ನೀಡಲಾಗಿದೆ ಎಂದು ತಿಳಿಸಿದರು.