ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ರಾಜ್ಯಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ರಂಗಭೂಮಿಯ ಒಂದು ದೊಡ್ಡ ಪ್ರಜ್ಞೆಯನ್ನು ಕಳೆದುಕೊಂಡಂತಹ ದುಃಖ ನಮ್ಮನ್ನು ಆವರಿಸಿದೆ ಎಂದು ಮೂಸೂರಿನಲ್ಲಿ ರಂಗಾಯಣದ ಮಾಜಿ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಜನಾರ್ದನ್ (ಜನ್ನಿ) ಹೇಳಿದರು.
ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಯಾಗಿ ನಾಟಕಗಳ ಮೂಲಕ ಸಮಾಜ, ಮನುಷ್ಯ ಜೀವನದ ಪರವಾದ ಆಶಯಗಳನ್ನು ಹೇಗೆ ಕಟ್ಟಬೇಕು, ಅದರ ಕರ್ತವ್ಯಗಳೇನು ಎಂಬುದನ್ನು ರಂಗಭೂಮಿಗೆ ಪರಿಚಯಿಸಿದ ಧೀಮಂತ ಎಂದು ಬಣ್ಣಸಿದರು.
ಪ್ರಿಯಾಂಕ್ ಖರ್ಗೆ ಸಂತಾಪ:
ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಚಿವರು, ಕಾರ್ನಾಡರು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ. ಸಾಹಿತಿ, ನಾಟಕಕಾರರಾಗಿ ಹಾಗೂ ಸಿನಿಮಾ ನಟರಾಗಿ ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೈದ ಅಪರೂಪ ವ್ಯಕ್ತಿತ್ವ ಹೊಂದಿದ್ದರು ಎಂದಿದ್ದಾರೆ.
ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು, ಭಾರತ ಜ್ಞಾನ ವಿಜ್ಞಾನ ಸಮಿತಿ, ಸಮುದಾಯ ಮತ್ತು ರಾಯಚೂರು ಕಲಾವಿದ ಬಳಗದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ನಾಡ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.