ಬೆಂಗಳೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಕೇಂದ್ರದ ಕ್ರಮ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಗರದ ಕೆ.ಆರ್. ಪುರದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪರ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.
ವಿಜಯೋತ್ಸವದ ನೇತೃತ್ವ ವಹಿಸಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಈವರೆಗೆ ಆಡಳಿತ ನಡೆಸಿದ ಸರ್ಕಾರಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಗೊಳಿಸುವ ಧೈರ್ಯ ಮಾಡಿರಲಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ವಿಧಿ ರದ್ದುಗೊಳಿಸಿ ದಿಟ್ಟತನ ಪ್ರದರ್ಶಿಸಿದೆ ಎಂದರು.
ಜಮ್ಮು ಮತ್ತು ಕಾಶ್ಮೀರವು ಭಾರತದಲ್ಲಿ ಉಳಿಯಲು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಬಾಯಿ ಪಟೇಲ್ ಕಾರಣರು. ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಸಮಸ್ಯೆಗೆ ಅಂತ್ಯ ಹಾಡಲು ಮೋದಿ ಮತ್ತು ಅಮಿತ್ ಶಾ ದೃಢ ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೋದಿಯವರು 370ನೇ ವಿಧಿ ರದ್ದುಗೊಳಿಸಿ ಉಕ್ಕಿನ ಮನುಷ್ಯರಾಗಿ ಮೆರೆದಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ನಂದೀಶ್ ರೆಡ್ಡಿ ಮಾತನಾಡಿ, ಕೇಂದ್ರದ ದಿಟ್ಟ ಕ್ರಮದಿಂದ ದೇಶ ಮತ್ತಷ್ಟು ಉತ್ತಮ ಸ್ಥಿತಿಗೆ ತಲುಪಲಿದ್ದು, ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುತ್ತದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತು ಪ್ರತ್ಯೇಕತಾವಾದಿಗಳಿಗೆ ಕಡಿವಾಣ ಬೀಳಲಿದೆ. ಕಾಶ್ಮೀರದ ವಿಷಯದಲ್ಲಿ ಸದಾ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನಕ್ಕೆ ಕೇಂದ್ರವು ಎಚ್ಚರಿಕೆಯ ಸಂದೇಶ ರವಾನಿಸಿದೆ. ಐತಿಹಾಸಿಕ ನಿರ್ಧಾರ ಕೈಗೊಂಡಿರುವ ಪ್ರಧಾನಿ ಮೋದಿಯವರು ಭಾರತದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.