ಬೆಂಗಳೂರು : ಮುಂಬರುವ ಚುನಾವಣೆ ಗೆಲುವನ್ನು ಧ್ಯೇಯವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದೆ ಎಂಬ ಮಾತು ಸತ್ಯಕ್ಕೆ ದೂರ ಅನ್ನುವ ಅರಿವು ಮೂಡಲಾರಂಭಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಒಗ್ಗಟ್ಟಿನ ಮಂತ್ರ ಪಠಿಸುತ್ತಿದೆ. ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದು ಕಳೆದ ಮೂರ್ನಾಲ್ಕು ತಿಂಗಳಿಂದ ಹೇಳಲಾಗುತ್ತಿತ್ತು. ಅದಕ್ಕೆ ಉದಾಹರಣೆಯ ರೀತಿ ಪಕ್ಷದ ನಾಯಕರ ಒಗ್ಗಟ್ಟನ್ನು ಮೆಚ್ಚಿದ್ದ ಜನ ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ರುಚಿ ನೀಡಿದ್ದರು.
ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಸನಿಹದವರೆಗೆ ಕರೆದೊಯ್ದು ಬಿಟ್ಟಿದ್ದರು. ಎಲ್ಲವೂ ಸರಿಯಾಗಿದೆ, ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸುವ ಕಾಂಗ್ರೆಸ್ ನಾಯಕರು ಹೆಚ್ಚು ಸ್ಥಾನ ಗಳಿಸಿ ನಂತರ ಹೈಕಮಾಂಡ್ ಮುಂದೆ ಸಿಎಂ ಯಾರು ಎನ್ನುವ ಪ್ರಸ್ತಾಪ ಇಡುತ್ತಾರೆ. ಇದೇ ರೀತಿ ಹೈಕಮಾಂಡ್ ಸಹ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ವಾರದ ಈಚಿನ ಬದಲಾವಣೆ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟ ನಿಂತಿಲ್ಲ. ಕೆಲ ದಿನ ವಿಶ್ರಾಂತಿ ಪಡೆದಿತ್ತು ಎನ್ನುವ ಸೂಚನೆ ನೀಡುತ್ತಿದೆ.
ಜಮೀರ್ ಮಾತು : ಮೂರ್ನಾಲ್ಕು ದಿನದ ಹಿಂದೆ ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಅವರು ಆಡಿದ ಮಾತು ಕೈ ನಾಯಕರ ಸಿಎಂ ಆಕಾಂಕ್ಷಿಗಳ ಮೇಲಾಟ ಮತ್ತೆ ಆರಂಭವಾಗುವಂತೆ ಮಾಡಿದೆ. ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಎಂದು ಹೇಳುವ ಮೂಲಕ ಮುಸುಕಿನ ಗುದ್ದಾಟವನ್ನು ಬಯಲಿಗೆ ತಂದಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಇದು ಕೆಣಕಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಜಮೀರ್ ಮಾಡಿದ ಆರೋಪಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ, ಇದೇ ರೀತಿ ಮಾತನಾಡುತ್ತಾ ಸಾಗಿದರೆ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸೂಕ್ಷ್ಮವಾಗಿ ಬಿಸಿ : ಸಿದ್ದರಾಮಯ್ಯ ಪರವಾಗಿ ದನಿ ಎತ್ತಿರುವುದನ್ನು ಪ್ರಸ್ತಾಪಿಸದ ಡಿಕೆಶಿ ಜಾಣ ನಡೆ ಇಟ್ಟಿದ್ದು, “ಪಕ್ಷದ ಶಾಸಕರಾಗಲಿ, ನಾಯಕರಾಗಲಿ ಅಥವಾ ಕಾರ್ಯಕರ್ತರಾಗಲಿ ಮತ್ತೊಬ್ಬರ ವಿರುದ್ಧ ಟೀಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ವಿಚಾರಗಳಿಗೆ ಹೋಗಬಾರದು. ಜಾತಿ, ಧರ್ಮ ಸೇರಿದಂತೆ ಯಾವುದೇ ಭಾವನೆಗಳಿಗೆ ಧಕ್ಕೆ ತರಬಾರದು. ಟೀಕಿಸುವ ಭರದಲ್ಲಿ ಗೌರವದ ಎಲ್ಲೆ ಮೀರಬಾರದು. ಜಮೀರ್ ಅಹಮದ್ ಅವರು ಮುಂದಿನ ದಿನಗಳಲ್ಲಿ ಇಂತಹ ಟೀಕೆ, ಹೇಳಿಕೆ ನೀಡುವ ಮುನ್ನ ತಾವು ಒಂದು ಪಕ್ಷದ ಪ್ರತಿನಿಧಿ ಎಂಬುದನ್ನು ಮರೆಯಬಾರದು. ಇದು ಪುನಾರವರ್ತನೆ ಆಗದಂತೆ ನೋಡಿಕೊಳ್ಳಬೇಕು' ಎಂದು ಸೂಕ್ಷ್ಮವಾಗಿ ಬಿಸಿ ಮುಟ್ಟಿಸಿದ್ದಾರೆ.
ಕಾಂಗ್ರೆಸ್ ರಾಜಕೀಯದಲ್ಲಿ ಗೊಂದಲ : ಕುಮಾರಸ್ವಾಮಿ ಹೆಸರಿಟ್ಟುಕೊಂಡು ಡಿಕೆಶಿ, ಜಮೀರ್ಗೆ ನೀಡಿರುವ ಎಚ್ಚರಿಕೆ ಪರೋಕ್ಷವಾಗಿ ಮುಂದಿನ ಸಿಎಂ ಸಿದ್ದರಾಮಯ್ಯ ಅನ್ನುವ ಹೇಳಿಕೆಗೂ ಕಡಿವಾಣ ಹಾಕುವಂತಿತ್ತು. ಸಿಎಂ ಆಕಾಂಕ್ಷಿಯಾಗಿರುವ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಇತ್ತೀಚೆಗೆ ಸಂಬಂಧ ಸುಧಾರಿಸಿದೆ ಎಂದು ಕಾಂಗ್ರೆಸ್ ಮೂಲಗಳು ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಅನಗತ್ಯವಾಗಿ ಜಮೀರ್ ಆಡಿರುವ ಮಾತು ಮತ್ತೆ ಕಾಂಗ್ರೆಸ್ ರಾಜಕೀಯದಲ್ಲಿ ಗೊಂದಲ ಸೃಷ್ಟಿಸಿದೆ. ಒಗ್ಗಟ್ಟು ಸಡಿಲವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕಾಂಗ್ರೆಸ್ ರಾಜ್ಯ ನಾಯಕರು ಯಾವ ಉತ್ತರ ಕೊಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಓದಿ: ನಟ ಚೇತನ್ ದೇಶದಲ್ಲಿ ಕೋಮುದ್ವೇಷ ಹರಡುತ್ತಿದ್ದಾರೆ: ಗಿರೀಶ್ ಭಾರದ್ವಾಜ್