ಬೆಂಗಳೂರು: ನಾನು ತಪ್ಪು ಮಾಡಿದ್ದರೆ ಯಾರೇ ಆಗಲಿ ಶಿಕ್ಷೆ ಕೊಡಲಿ. ಪೊಲೀಸರು ನಮ್ಮ ರಾಜ್ಯದಲ್ಲಿ ಸ್ಟ್ರಾಂಗ್ ಆಗಿದ್ದಾರೆ. ಅವರು ತನಿಖೆ ಮಾಡ್ತಾರೆ, ಮಾಡಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಸಂಬರಗಿ ಒಳ್ಳೆ ಕೆಲಸ ಮಾಡ್ತಿದ್ದಾರೆ, ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದರು.
ಕೋವಿಡ್ನಿಂದ ಸತ್ತವರ ಬಗ್ಗೆ ನಾನು ಎಷ್ಟು ಕೆಲಸ ಮಾಡ್ತಿದ್ದೇನೆ. ಅದನ್ನ ನೀವೇನಾದ್ರೂ ತೋರಿಸಿದ್ದೀರಾ? ಸಿದ್ದರಾಮಯ್ಯ ಅವರು ಏನು ಹೇಳಿದ್ರು, ಕಳ್ಳ ನನ್ನ ಜೊತೆ ನಿಂತು ಫೋಟೋ ತೆಗೆಸಿಕೊಂಡ್ರೆ ಕಳ್ಳ ಅನ್ನೋಕೆ ಆಗುತ್ತಾ ಅಂದಿದ್ದಾರೆ? ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ತಾರೆ. ಅದಕ್ಕೆ ನಾನು ಇನ್ವಾಲ್ ಆಗಿದ್ದೇನಾ? ಫಾಸಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಸಿಲ್ಗೂ ನನಗೂ ಯಾವುದೇ ಸಂಬಧವಿಲ್ಲ.
ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ. ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರ್ತಾರೆ. ಅವನೂ ಬಂದಿರಬಹುದು. ರಾಜ್ಯದಿಂದ ಸಾವಿರಾರು ಜನ ಬರ್ತಾರೆ ಎಂದು ವಿವರಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರ ಮಾತನಾಡಿ, ಕೊಲಂಬೋಗೆ ಹೋಗುವುದು ತಪ್ಪಾ? ನಾನು ನನ್ನ ಫ್ಯಾಮಿಲಿ ಜೊತೆ ಎರಡು ಸಲ ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಪ್ರವಾಸ ಹೋಗಿದ್ದೇವೆ. ಕೊಲಂಬೋಗೆ ಹೋದ್ರೆ ಕ್ಯಾಸಿನೋಗೆ ಹೋದಂಗೆ ಅಂದುಕೊಳ್ಳೋದಾ? ಎಂದರು.
ನನ್ನನ್ನು ರಾಜಕೀಯವಾಗಿ ಮುಗಿಸೋಕೆ ಹೊರಟಿದ್ದಾರೆ. ಆದರೆ ನನ್ನನ್ನು ಮುಗಿಸೋಕೆ ಯಾರಿಗೂ ಆಗಲ್ಲ. ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಸಂಜನಾ ನನ್ನ ಜೊತೆ ಹೋಗಿದ್ದಾರೆ ಅಂತ ಆರೋಪ ಮಾಡಿದ್ದೀರ. ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಸಂಜನಾ ಏನಾದ್ರೂ ದಾಖಲೆ ಕೊಟ್ಟಿದ್ದಾರಾ? ಈಗ ಸಂಜನಾ ಬಿಟ್ಟು ಫಾಸಿಲ್ ಹಿಡಿದುಕೊಂಡಿದ್ದೀರಾ. ನಾನು ಎಲ್ಲೂ ತಪ್ಪು ಮಾಡಿಲ್ಲ. ಪೊಲೀಸರು ತನಿಖೆ ಮಾಡ್ತಿದ್ದಾರೆ, ಮಾಡಲಿ. ಸಂಜನಾ ಜೊತೆ ಜಮೀರ್ ಹೋಗಿದ್ರು ಅಂತ ಯಾರು ಹೇಳಿದ್ದು? ಸಂಬರಗಿ ತಾನೇ, ಅವರನ್ನೇ ಕೇಳಿ. ಸಂಜನಾ ಜೊತೆ ನಾನು ಹೋಗಿರೋ ಒಂದು ಫೋಟೋ ತೋರಿಸಿ. ಸುಮ್ಮನೆ ಸಂಜನಾ ಬಗ್ಗೆ ಯಾಕೆ ಎಳೆದು ತರ್ತೀರ ಎಂದರು.
ರಾಹುಲ್ ಜೊತೆ ಸಂಬರಗಿ ಫೋಟೋ ಇದೆ. ನೀವು ಮಾಧ್ಯಮಗಳು ಯಾಕೆ ಸಂಬರಗಿ ಬೆನ್ನು ಬಿದ್ದಿಲ್ಲ. ಡ್ರಗ್ ಪೆಡ್ಲರ್ ಅಂತ ರಾಹುಲ್ಗೆ ಹೇಳ್ತಿದ್ದೀರ. ಯಾಕೆ ಸಂಬರಗಿ ಅವರ ಜೊತೆ ಇದ್ರೂ ಕೇಳ್ತಿಲ್ಲ. ಮೊದಲು ಸಂಬರಗಿಯನ್ನು ಕೇಳಿ ಎಂದರು.