ಬೆಂಗಳೂರು: ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಏಕಾಏಕಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಸಂದರ್ಭದಲ್ಲಿ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಜಮಾತ್-ಇ-ಇಸ್ಲಾಮಿ ಕರ್ನಾಟಕ ಸಂಘಟನೆಯು ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಲು "ಕೋವಿಡ್ ಟಾಸ್ಕ್ ಫೋರ್ಸ್" ಸ್ಥಾಪಿಸಿದೆ. ಅಷ್ಟೇ ಅಲ್ಲದೆ ಇದರ ಅಡಿಯಲ್ಲಿ ಕಾಲ್ ಸೆಂಟರ್ ಸಹ ಸ್ಥಾಪಿಸಲಾಗಿದೆ.
ಈ ಸೇವೆಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅಕ್ಬರ್ ಅಲಿ, ಜನರು ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಮುಖ್ಯವಾಗಿ ಆಮ್ಲಜನಕದ ಕೊರತೆ ಎದುರಾಗಿದೆ. ಸರ್ಕಾರವು ಆಮ್ಲಜನಕವನ್ನು ಒದಗಿಸಬೇಕು. ಮೃತದೇಹಗಳನ್ನು ಸುಡಲು ಶವಾಗಾರಗಳಲ್ಲಿ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೋವಿಡ್ ಕಾರ್ಯಪಡೆಯ ಸ್ವಯಂಸೇವಕರಾದ ಟಿ.ವಿ.ಭಟ್ ಮಾತನಾಡಿ, ಕೋವಿಡ್ ಪೀಡಿತರ ಸಹಾಯಕ್ಕಾಗಿ ತಮ್ಮ ತಂಡದ ಅನೇಕ ಸದಸ್ಯರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ತಿಳಿಸಿದರು.