ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಅರಾಜಕತೆ ಸೃಷ್ಟಿಸುತ್ತಿದ್ದು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ. ರಮಡ ರೆಸಾರ್ಟ್ ಬಳಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, 15ಕ್ಕೂ ಹೆಚ್ಚು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲವಿಲ್ಲ ಎಂದಿದ್ದಾರೆ. ಸಿಎಂ, ಶಾಸಕರು ರಾಜೀನಾಮೆ ನೀಡಿದಾಗಲೇ ರಾಜೀನಾಮೆ ನೀಡಿ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರದಲ್ಲಿಉಳಿಯುವ ಹಕ್ಕು ಮೈತ್ರಿಪಕ್ಷಗಳಿಗಿಲ್ಲ ಎಂದರು.
ಶಾಸಕರ ರಾಜೀನಾಮೆ ವಿಚಾರದಲ್ಲಿ ವಾದ ವಿವಾದಗಳು ಎದ್ದಿದ್ದವು. ಈ ಹಿನ್ನೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ಮಧ್ಯಂತರ ತೀರ್ಪು ಹೊರ ಬಿದ್ದಿದೆ. ಸುಪ್ರೀಂ ತೀರ್ಪನ್ನು ನಾವೆಲ್ಲರೂ ಸ್ವಾಗತ ಮಾಡುತ್ತೇವೆ. ಸ್ಪೀಕರ್ ಕಾಲಮಿತಿಯೊಳಗೆ ಒಂದು ನಿರ್ಧಾರಕ್ಕೆ ಬರುತ್ತಾರೆನ್ನುವ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೋಮಣ್ಣ, ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕಾರ್ಯಾಂಗ, ಶಾಸಕಾಂಗ ಒಂದೇ ನಾಣ್ಯದ ಎರಡು ಮುಖಗಳು ಎಂಬುವುದರ ಜೊತೆಗೆ ಶಾಸಕಾಂಗ ಯಾವುದೇ ಹಂತದಲ್ಲೂ ತಪ್ಪು ಮಾಡಿದರೂ ನ್ಯಾಯಾಂಗ ಅದನ್ನು ಸರಿ ದಾರಿಗೆ ಕರೆದೊಯ್ಯುತ್ತದೆ ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆ ಎಂದರು.
ರಾಜ್ಯದ ಜನರ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಂಡಿರುವ ಮೈತ್ರಿ ಸರ್ಕಾರದ ಸ್ವಾಭಿಮಾನಿ ಶಾಸಕರು ಇವತ್ತು ರಾಜೀನಾಮೆಯನ್ನು ನೀಡಿರುವುದನ್ನು ಮತ್ತು ಈ ಕುರಿತು ಸುಪ್ರೀಂ ಕೋರ್ಟ್ನ ತೀರ್ಪನ್ನು ನೋಡಿದ ರಾಜ್ಯದ ಜನತೆ ಸಂತೋಷ ಪಡುತ್ತಿದ್ದಾರೆ, ರಾಜ್ಯ ಸರ್ಕಾರ ಬರಗಾಲದಲ್ಲಿಯೂ ಸಹಾಯ ಮಾಡದೆ, ಕುಡಿಯಲು ನೀರು ಕೊಡದೆ ರಾಜ್ಯದ ಜನರ ವಿರೊಧ ಕಟ್ಟಿಕೊಂಡಿದೆ, ಅಲ್ಲದೇ ಇವತ್ತು ಹೊರ ಬಂದಿರುವ ತೀರ್ಪು ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿ ಮುಂದುವರೆಯಲು ಯೋಗ್ಯವಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ , ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟರು.