ಬೆಂಗಳೂರು: ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಮತ್ತು ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಆರೋಪ ಮಾಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ(ಸಿಜೆಐ)ಗೆ ಪತ್ರ ಬರೆದಿರುವುದನ್ನು ಬೆಂಗಳೂರು ವಕೀಲರ ಸಂಘ (ಎಎಬಿ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಎನ್. ಗಂಗಾಧರಯ್ಯ ಸಿಜೆಐಗೆ ಪತ್ರ ಬರೆದು, ಜಗನ್ ಮೋಹನ್ ರೆಡ್ಡಿ ಅವರ ಈ ನಡೆ ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ಮಾಡಿದ ದಾಳಿಯಾಗಿದೆ. ಇದು ದೇಶದ ನ್ಯಾಯಾಂಗ ಮತ್ತು ದೇಶದ ನೆಲದ ಕಾನೂನಿನ ಗೌರವ ಹಾಗೂ ಘನತೆಯನ್ನು ಕುಗ್ಗಿಸುತ್ತದೆ. ಇಂತಹ ಉದ್ದೇಶಪೂರ್ವಕ ಕೃತ್ಯಗಳನ್ನು ನಿಯಂತ್ರಿಸುವ ಸಂಬಂಧ ಒಂದು ವ್ಯವಸ್ಥೆ ರೂಪಿಸಬೇಕು ಎಂದು ಕೋರಿದ್ದಾರೆ.