ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್. ಜಗದೀಶ್ ಕುಮಾರ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿ(ಕೆಎಸ್ಬಿಸಿ)ನಲ್ಲಿ ಕೆ.ಎನ್ ಜಗದೀಶ್ ಕುಮಾರ್ ಹೆಸರನ್ನೇ ನೋಂದಾಯಿಸಿಕೊಂಡಿಲ್ಲ ಎಂಬುದು ಬಹಿರಂಗವಾಗಿದೆ.
ಹಾಗೆಯೇ ಈ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿದೆ. ಅಲ್ಲದೇ ಒಂದು ವೇಳೆ ಜಗದೀಶ್ ಬೇರೆ ಯಾವುದೇ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರೆಸುವಂತಿಲ್ಲ ಎಂದು ಕೆಎಸ್ಬಿಸಿ ಮಾಹಿತಿ ನೀಡಿದೆ.
ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್.ಬಸವರಾಜು ಅವರು ಪರಿಷತ್ ಮ್ಯಾನೇಜರ್ಗೆ ಸೂಚಿಸಿದ್ದರು. ಈ ಮೇರೆಗೆ ಮಾಹಿತಿ ನೀಡಿರುವ ಪರಿಷತ್ ಮ್ಯಾನೇಜರ್, ಕೆ.ಎನ್ ಜಗದೀಶ್ ಕುಮಾರ್ ಕೆಎಸ್ಬಿಸಿಯಲ್ಲಿ ನೋಂದಾಯಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೆ.ಎನ್ ಜಗದೀಶ್ ತಾವು ದೆಹಲಿ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ದೆಹಲಿ ಬಾರ್ ಕೌನ್ಸಿಲ್ನಲ್ಲಿ ಪಡೆದಿಕೊಂಡಿರುವ ಎನ್ರೋಲ್ಮೆಂಟ್ ಐಡಿ ಕಾರ್ಡನ್ನು ಫೇಸ್ಬುಕ್ನಲ್ಲೂ ಪೋಸ್ಟ್ ಮಾಡಿಕೊಂಡಿದ್ದಾರೆ.
ವಕೀಲರ ಕಾಯ್ದೆ-1961ರ ನಿಯಮ 30ರ ಪ್ರಕಾರ ಯಾವುದೇ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡರೂ ಅವರು ದೇಶದ ಯಾವುದೇ ಕೋರ್ಟ್ನಲ್ಲಿ ವಕೀಲಿಕೆ ಮಾಡಬಹುದು. ಆದರೆ, ಕಾರ್ಯಕ್ಷೇತ್ರವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಿಕೊಂಡಾಗ 6 ತಿಂಗಳ ಒಳಗೆ ಯಾವ ರಾಜ್ಯದಲ್ಲಿ ವಕೀಲಿಕೆ ನಡೆಸುತ್ತಾರೋ ಅಲ್ಲಿನ ಪರಿಷತ್ತಿಗೆ ತಮ್ಮ ಸನ್ನದನ್ನು ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಕೀಲರ ಪರಿಷತ್ತು ನಿಯಮ ಮಾಡಿದೆ.
ಇದನ್ನೂ ಓದಿ: ಸಿಡಿ ಪ್ರಕರಣ: ಮಲ್ಲೇಶ್ವರಂ ಅಪಾರ್ಟ್ಮೆಂಟ್ ಫ್ಲ್ಯಾಟ್ನಲ್ಲಿ ಪೊಲೀಸರಿಂದ ಸ್ಥಳ ಮಹಜರು