ಬೆಂಗಳೂರು: ನ್ಯೂ ಮುಂಬೈ ಮಾದರಿಯಲ್ಲಿ ನವ ಬೆಂಗಳೂರು ನಿರ್ಮಾಣ ಮಾಡುವ ಅಗತ್ಯವಿದ್ದು, ಈ ಸಂಬಂಧ ಎಲ್ಲರೂ ಚರ್ಚಿಸಿ ತೀರ್ಮಾನಿಸುವ ಅಗತ್ಯವಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ಸರ್ಕಾರದಿಂದ ನೂತನ ಕೈಗಾರಿಕಾ ನೀತಿ ಜಾರಿಗೊಳಿಸಲಾಗುತ್ತದೆ. ಅದರಲ್ಲಿ ಟೈರ್ 2-3 ನಗರಗಳಿಗೆ ಆದ್ಯತೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ಇದೇ ಮೊದಲ ಬಾರಿಗೆ ಬೆಂಗಳೂರಿನ ಹೊರಗೆ ಹುಬ್ಬಳ್ಳಿಯಲ್ಲಿ ಇನ್ವೆಸ್ಟರ್ಸ್ ಮೀಟ್ ಮಾಡಲಾಗಿದೆ ಎಂದರು.
ಬೆಂಗಳೂರು ಕೇಂದ್ರೀಕೃತ ಕೈಗಾರಿಕಾ ವ್ಯವಸ್ಥೆಗೆ ಇನ್ನೂ ಅವಕಾಶವಿಲ್ಲ. ಹುಬ್ಬಳ್ಳಿ, ವಿಜಯಪುರ, ಬೆಳಗಾವಿ, ಬಾಗಲಕೋಟೆಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಎಂದರು.
ಕೆಲ ಸದಸ್ಯರು ಕೇಳಿದ ಉಪ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನ್ಯೂ ಮುಂಬೈ ರೀತಿ ನಗರದಿಂದ ಆಚೆ 40 ಕಿ.ಮೀ. ನವ ಬೆಂಗಳೂರು ಮಾಡಿದ್ರೆ ಉತ್ತಮ. ಈಗ ಉದ್ಯೋಗವಕಾಶಗಳು ಸಿಗುತ್ತಿಲ್ಲ. ಈ ರೀತಿ ಮಾಡಿದರೆ ಉದ್ಯೋಗವಕಾಶ ಹೆಚ್ಚಾಗಲಿದೆ. ಈ ಬಗ್ಗೆ ನಾವೆಲ್ಲರೂ ತೀರ್ಮಾನ ಮಾಡಬೇಕಿದೆ ಎಂದು ಸದನದಲ್ಲಿ ಉತ್ತರಿಸಿದರು.