ಬೆಂಗಳೂರು: ಸ್ವಯಂಪ್ರೇರಿತವಾಗಿ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಧ್ರುವೀಕರಣ ಆಗಲಿದೆ. ರಾಜಕೀಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಜನಮನ್ನಣೆ ಗಳಿಸ್ತಿದೆ. ಬೇರೆ ರಾಜ್ಯಗಳಲ್ಲೂ ಪ್ರಭಾವ ಬೀರುತ್ತಿದೆ. ಚುನಾವಣೆಯ ಫಲಿತಾಂಶ ಪ್ರಭಾವ ಬೀರುತ್ತಿದೆ. ನಾವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಯಾರೂ ನಿರೀಕ್ಷಿಸಿದ ರೀತಿಯಲ್ಲಿ ಈಡೇರಿಸಿದ್ದೇವೆ. ಇದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮುಂದಿನ ಪಂಚ ರಾಜ್ಯಗಳ ಚುನಾವಣೆ ಸೆಮಿಫೈನಲ್. ಲೋಕಸಭೆ ಚುನಾವಣೆ ನಮಗೆ ಫೈನಲ್. ಇವತ್ತು ಬಿಜೆಪಿ, ಜೆಡಿಎಸ್ನವರು ಕಾಂಗ್ರೆಸ್ಗೆ ಬರುತ್ತಿದ್ದಾರೆ. ರಾಮಣ್ಣ ಲಮಾಣಿ ನನ್ನ ಜೊತೆಗೆ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದರು.
20ಕ್ಕಿಂತ ಹೆಚ್ಚು MP ಸೀಟು ಗೆಲ್ಲುತ್ತೇವೆ: ಇದೇ ವೇಳೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, 20ಕ್ಕಿಂತ ಹೆಚ್ಚು ಎಂಪಿ ಸೀಟು ನಮಗೆ ಬರಲಿದೆ. ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರು ಹೇಳಿಕೊಂಡು ಓಡಾಡ್ತಿದ್ದಾರೆ. ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಸರ್ಕಾರ ಬೀಳುತ್ತೆ ಅಂತಾರೆ. ಆದರೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದನ್ನು ನಾವು ಹೇಳ್ತಿಲ್ಲ, ಬಿಜೆಪಿಯವರೇ ಹೇಳ್ತಿದ್ದಾರೆ. ಈ ವಾತಾವರಣ ಇನ್ನಷ್ಟು ಹೆಚ್ಚಾಗಲಿದೆ. ಇಂಡಿಯಾ ಒಕ್ಕೂಟ ಆತ್ಮವಿಶ್ವಾಸ ಮೂಡಿಸುತ್ತಿದೆ. ಮೋದಿಯವರ ಕಾಲ ಅಂತ್ಯವಾಗ್ತಿದೆ ಎಂದರು.
ಏಕಕಾಲಕ್ಕೆ ರಿಂಗಣಿಸಿದ ವಿಕೋಪ ಮೆಸೇಜ್ ಅಲರ್ಟ್: ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿಕೋಪ ಅಲರ್ಟ್ ಟ್ರಯಲ್ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಮೊಬೈಲ್ ರಿಂಗಣಿಸಿತು. ಡಿಕೆಶಿ ಭಾಷಣದ ವೇಳೆ ಮೊಬೈಲ್ ಅಲಾರ್ಮ್ ಸದ್ದು ಮಾಡಿತು. ಹತ್ತಾರು ಮೊಬೈಲ್ಗಳು ಏಕಕಾಲಕ್ಕೆ ಸದ್ದು ಮಾಡಿದವು. ಕೇಂದ್ರ ಸರ್ಕಾರದ ವಿಕೋಪ ಎಚ್ಚರಿಕೆ ಮೊಬೈಲ್ ಅಲರ್ಟ್ ಅಲಾರಾಂ ಸದ್ದಿಗೆ ಕೈ ನಾಯಕರು ಗಲಿಬಿಲಿಯಾದರು. ಈ ವೇಳೆ ವಿಕೋಪ ಮಾಹಿತಿ ಅಲಾರ್ಮ್ ಎಂದು ಹೇಳಿದಾಗ ಡಿಕೆಶಿ ಬಿಜೆಪಿಯವರೂ ಅಲರ್ಟ್ ಆಗಲಿ ಬಿಡಿ ಎಂದು ನಗೆಚಟಾಕಿ ಹಾರಿಸಿದರು.
ರಾಮಪ್ಪ ಲಮಾಣಿ ಕಾಂಗ್ರೆಸ್ ಸೇರ್ಪಡೆ: ಬಿಜೆಪಿ ಮುಖಂಡ, ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. 2023ರ ಚುನಾವಣೆಯಲ್ಲಿ ರಾಮಪ್ಪ ಲಮಾಣಿಗೆ ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ಶಿರಹಟ್ಟಿಯಲ್ಲಿ ಡಾ.ಚಂದು ಲಮಾಣಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಸಿಟ್ಟಾಗಿದ್ದರು. ಪಕ್ಷದಿಂದ ದೂರವೇ ಉಳಿದಿದ್ದರು.
ಪಕ್ಷ ಸೇರ್ಪಡೆ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಬಿ.ಎನ್. ಚಂದ್ರಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ : ವಿವಿಧ ಪಕ್ಷಗಳ 42 ಮುಖಂಡರು ಕಾಂಗ್ರೆಸ್ ಸೇರಲು ಕಾಯುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್