ಬೆಂಗಳೂರು: ಬಿಜೆಪಿ ತೊರೆದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತವಾಗಿದೆ. ಇಂದು ಬೆಳಗ್ಗೆ ಮಲ್ಲಿಕಾರ್ಜುನ ಖರ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿಯೇ ಶೆಟ್ಟರ್ ಕೈ ಸೇರ್ಪಡೆ ಆಗಲಿದ್ದು, ಈಗಾಗಲೇ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ.
ಇನ್ನೊಂದಡೆ, 67 ಮಂದಿ ಬಿಜೆಪಿ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲಾ ಲಿಂಗಾಯತ ಸಮುದಾಯದ ನಾಯಕರು ನಮ್ಮ ಬೆಂಬಲಕ್ಕೆ ಬರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ನಾಯಕರು ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಜಗದೀಶ್ ಶೆಟ್ಟರ್ ಜೊತೆ ನಿನ್ನೆ ಸಮಾಲೋಚಿಸಿದ್ದೇವೆ. ಆದರೆ ಅವರು ಯಾವುದೇ ಬೇಡಿಕೆಯನ್ನು ನಮ್ಮ ಮುಂದಿಟ್ಟಿಲ್ಲ. ನಾನು ಈ ಸಂದರ್ಭದಲ್ಲಿ ಏನನ್ನು ಹೇಳಲು ಇಚ್ಛಿಸುವುದಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗೋಷ್ಟಿ ಕರೆದಿದ್ದು, ಅಲ್ಲಿ ಎಲ್ಲವನ್ನು ವಿವರಿಸಲಿದ್ದಾರೆ. ಬಿಜೆಪಿ ಪಕ್ಷದ ಸದಸ್ಯತ್ವಕ್ಕೂ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ್ದಾರೆ. ಇಂದು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದು, ಮುಂದಿನ ವಿಚಾರವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರು ವಿವರಿಸುತ್ತಾರೆ ಎಂದು ಹೇಳಿದರು. ಬೆಂಗಳೂರಿನಲ್ಲಿರುವ ಶಾಮನೂರು ಶಿವಶಂಕರಪ್ಪ ನಿವಾಸದಿಂದ ಜಗದೀಶ್ ಶೆಟ್ಟರ್ ಕಾರಿನಲ್ಲಿ ಕೆಪಿಸಿಸಿ ಅಕಚೇರಿಗೆ ತೆರಳಿದ್ದಾರೆ. ಮೂರು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ ಬಳಿಕ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಜೊತೆ ಒಂದೇ ಕಾರಿನಲ್ಲಿ ಆಗಮಿಸಿ ಕಚೇರಿಯನ್ನು ತಲುಪಿದರು.
ಕೆಲವೇ ನಿಮಿಷ ಕಾಯಿರಿ ಎಂದ ಸುರ್ಜೇವಾಲಾ.. ಇನ್ನು ಕೆಲ ನಿಮಿಷ ಕಾಯಿರಿ ಶೆಟ್ಟರ್ ವಿಚಾರವಾಗಿ ಎಲ್ಲಾ ವಿಷಯ ನಿಮಗೆ ಮನವರಿಕೆ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.
ಇದನ್ನೂ ಓದಿ : ನಾನಿನ್ನೂ ಬಿಜೆಪಿಗೆ ರಾಜೀನಾಮೆ ನೀಡಿಲ್ಲ ಎಂದ ಶೆಟ್ಟರ್.. ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಮಾಧ್ಯಮಗೋಷ್ಟಿ
ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬರಲಿದ್ದಾರೆ. ಅವರು ಬರುತ್ತಿದ್ದಂತೆ ನಿಮಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ವಿವರಿಸಿದ್ದಾರೆ. ಲಿಂಗಾಯತ ಸಮುದಾಯವನ್ನೇ ಬಿಜೆಪಿ ನಿರ್ಲಕ್ಷಿಸುತ್ತಿದೆ. ಈಗಾಗಲೇ ಬಿಎಸ್ ಯಡಿಯೂರಪ್ಪರನ ನಿರ್ಲಕ್ಷಿಸಿದ್ದ ಬಿಜೆಪಿ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅಂತ ನಾಯಕರನ್ನು ದೂರ ಇರಿಸಿದೆ. ಸಾಕಷ್ಟು ಬಿಜೆಪಿ ನಾಯಕರು ಲಿಂಗಾಯತ ಸಮುದಾಯದ ಮುಖಂಡರ ನಿರ್ಲಕ್ಷವನ್ನ ಗಮನಿಸುತ್ತಿದ್ದಾರೆ. ಅತ್ಯಂತ ಪೋರಿತವಾಗಿಯೇ ನಿಮಗೆ ಎಲ್ಲ ವಿಚಾರಗಳ ಮನವರಿಗೆ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಶೆಟ್ಟರ್ ರಾಜೀನಾಮೆಯಿಂದ ನಷ್ಟವಿಲ್ಲ.. ಪಕ್ಷಕ್ಕೆ ಜೀರ್ಣಿಸಿಕೊಳ್ಳುವ ಶಕ್ತಿಯಿದೆ: ಸಿಎಂ ಬೊಮ್ಮಾಯಿ