ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಕರ್ನಾಟಕದ ಪಾಲಿಗೆ ದೊಡ್ಡ ರಿಲೀಫ್ ನೀಡಿದೆ. ಆದರೆ, ಯೋಜನೆ ಜಾರಿಗೆ ರಾಜ್ಯದ ಮುಂದೆ ಹಲವು ಸವಾಲುಗಳಿವೆ.
ನೀರು ಹಂಚಿಕೆ ಬಗ್ಗೆ ನ್ಯಾಯಾಧಿಕರಣ ನೀಡಿದ ತೀರ್ಪನ್ನು ಜಾರಿಗೊಳಿಸಬೇಕೆಂಬ ಕರ್ನಾಟಕದ ಮನವಿಗೆ ಮನ್ನಣೆ ನೀಡಿರುವ ಸುಪ್ರೀಂಕೋರ್ಟ್, ತೀರ್ಪಿನ ಅನುಷ್ಠಾನಕ್ಕೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಆ ಮೂಲಕ ಮೊದಲ ಕಾನೂನು ಕಂಠಕವನ್ನು ರಾಜ್ಯ ಸರ್ಕಾರ ನಿವಾರಿಸಿದೆ. ಇದರಂತೆ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಲಭಿಸಲಿದೆ. ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರು ಸಿಗಲಿದೆ. ಕರ್ನಾಟಕ 36 ಟಿಎಂಸಿ ನೀರಿಗೆ ಬೇಟಿಕೆಯಿಟ್ಟಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ ಜುಲೈ 15ಕ್ಕೆ ಅಂತಿಮ ವಿಚಾರಣೆ ನಡೆಸಲಿದೆ. ಸುಪ್ರೀಂ ಮಧ್ಯಂತರ ಆದೇಶ ಕರ್ನಾಟಕದ ಪರವಾಗಿದ್ದರೂ ಕಳಸಾ-ಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಹಾದಿ ಸುಗಮವಾಗಿಲ್ಲ.
ಕಳಸಾ ಬಂಡೂರಿ ಯೋಜನೆ:ಕರ್ನಾಟಕ ಮಹದಾಯಿ ನದಿ ಬಳಿ ಕಳಸಾ-ಬಂಡೂರಿ ನಾಲೆಗಳಲ್ಲಿ ಮೂರು ತಿರುವು ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಈ ಮೂಲಕ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲಾಗುವುದು.
ಕಳಸಾ ನಾಲೆ: 1.72 ಟಿಎಂಸಿ ನೀರು ಹರಿಬಿಡುವ 5.1 ಕಿ.ಮೀ ಉದ್ದದ ನಾಲೆ ನಿರ್ಮಿಸಲಾಗಿದೆ. ಅಲ್ಲಿ ಎರಡು ತಿರುವು ಅಣೆಕಟ್ಟುಗಳನ್ನು ಕಟ್ಟಲಾಗುವುದು. ಇದಕ್ಕಾಗಿ ಸುಮಾರು 886 ಕೋಟಿ ರೂ. ಕಾಮಗಾರಿ ವೆಚ್ಚ ತಗುಲಲಿದೆ.
ಬಂಡೂರಿ ನಾಲೆ: 2.18 ಟಿಎಂಸಿ ಸಾಮರ್ಥ್ಯದ 6.1 ಕಿ.ಮೀ ಉದ್ದದ ಬಂಡೂರಿ ನಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಒಂದು ತಿರುವು ಅಣೆಕಟ್ಟನ್ನು ನಿರ್ಮಿಸಲಾಗುತ್ತದೆ. ಇದಕ್ಕಾಗಿ ಸುಮಾರು 791 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ಜಲಸಂಪನ್ಮೂಲ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಉತ್ಪಾದನಾ ಘಟಕ : ಉಳಿದಿರುವ 8.02 ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಯೋಜಿಸಲಾಗಿದೆ. ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಸುಮಾರು 4,500 ಕೋಟಿ ರೂ. ವೆಚ್ಚವಾಗಲಿದೆ.
ಮುಂದಿರುವ ಸವಾಲು ಏನು?: ಯೋಜನೆ ಕಾರ್ಯರೂಪಕ್ಕೆ ಬರುವುದು ವಿಳಂಬವಾಗುವ ಸಾಧ್ಯತೆನೇ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಮೊದಲಿಗೆ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆ ಹೊರಡಿಸಬೇಕಾಗಿದೆ. ಇದು ಇನ್ನೂ ಸಮಯ ತೆಗೆದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಯೋಜನೆಗಾಗಿ ಕೇಂದ್ರ ಅರಣ್ಯ ಇಲಾಖೆಯ ಅನುಮೋದನೆ ಪಡೆಯುವುದು ರಾಜ್ಯದ ಮುಂದಿರುವ ದೊಡ್ಡ ಸವಾಲಾಗಿದೆ. ಯೋಜನೆ ಜಾರಿಗೆ ಸುಮಾರು 500 ಹೆಕ್ಟೇರ್ಗೂ ಹೆಚ್ಚು ಅರಣ್ಯ ಭೂಮಿಯ ಅಗತ್ಯವಿದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ವಿಳಂಬವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸಲು ಸುಮಾರು 7,000 ಕೋಟಿ ರೂ. ಅನುದಾನ ಬೇಕಾಗಿದೆ. ಅದರಲ್ಲೂ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸುಮಾರು 1,800 ಕೋಟಿ ರೂ. ವೆಚ್ಚ ತಗುಲಲಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕಾಸು ಹೊಂದಾಣಿಕೆ ಸರ್ಕಾರದ ಮುಂದಿರುವ ಕಠಿಣ ಸವಾಲು. ಇದಕ್ಕಾಗಿ ಸಾಲ ಪಡೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಬಜೆಟ್ನಲ್ಲಿ ಯೋಜನೆಗೆ ಸಿಎಂ ಹೆಚ್ಚುವರಿ ಅನುದಾನ ನೀಡಲಿದ್ದಾರೆ ಎನ್ನಲಾಗಿದೆ.