ಬೆಂಗಳೂರು: ನಗರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ಮುಂದುವರೆದಿದ್ದು, ಕಂತೆ ಕಂತೆ ನಗದು ಹಣ ಪತ್ತೆಯಾಗುತ್ತಲೇ ಇದೆ. ಭಾನುವಾರ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಬಿಲ್ಡರ್‌ವೊಬ್ಬರ ಅಪಾರ್ಟ್‌ಮೆಂಟ್ ಮೇಲೆ ನಡೆಸಿದ ದಾಳಿ ವೇಳೆ 40 ಕೋಟಿ ರೂ.ಗಿಂತ ಅಧಿಕ ನಗದು ಸಿಕ್ಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಗುತ್ತಿಗೆದಾರ ಸಂತೋಷ ಕೃಷ್ಣಪ್ಪ ಅವರ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ಇಷ್ಟೊಂದು ಹಣ ಪತ್ತೆಯಾಗಿದೆ. ಈ ಹಣ ಹಣ ಪತ್ತೆಯಾಗುತ್ತಿದ್ದಂತೆ 6ಕ್ಕೂ ಹೆಚ್ಚು ಕಾರುಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ವೇಳೆ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿಯೊಬ್ಬರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ಹಣದ ಮೂಲ ಕಂಡು ಹಿಡಿಯಲು ಮಾಜಿ ಎಂಎಲ್‌ಸಿ ಸಂಬಂಧಿಕರನ್ನು ಫ್ಲ್ಯಾಟ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಗುತ್ತಿಗೆದಾರ ಸಂತೋಷ ನಿವಾಸದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಇಡೀ ದಿನ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಫ್ಲ್ಯಾಟ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ದಾಳಿ ಸಂದರ್ಭಗಳಲ್ಲಿ 32 ಬಾಕ್ಸ್‌ಗಳಲ್ಲಿ 40 ಕೋಟಿ ರೂ.ಗಿಂತಲೂ ಅಧಿಕ ಹಣ ಸಿಕ್ಕಿದೆ. ಸಂಜೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ಪತ್ತೆಯಾಗಿರುವ ಹಣದ ಕುರಿತು ಮತ್ತಷ್ಟು ಮಾಹಿತಿ ನೀಡುವಂತೆ ಸಂತೋಷ್‌ಗೆ ನೋಟಿಸ್ ನೀಡಿದ್ದಾರೆ. ಇದೇ ವೇಳೆ ಹಲವು ದಾಖಲೆಗಳು, 3 ಟ್ರಂಕ್, 3 ಬ್ಯಾಗ್, 1 ಸೂಟ್‌ಕೇಸ್‌ಗಳಲ್ಲಿ ಹಣವನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೊಂಡೊಯ್ದಿದ್ದಾರೆ.
ನನಗೂ ಸಂತೋಷ್‌ಗೂ ಸಂಬಂಧವಿಲ್ಲ: ಗುತ್ತಿಗೆದಾರ ಸಂತೋಷ್, ಕಾಂಗ್ರೆಸ್ ಮಾಜಿ ಎಂಎಲ್‌ಸಿ ಸಿ. ಕಾಂತರಾಜು ಅವರ ಹೆಸರನ್ನು ಪ್ರಸ್ತಾಪಿಸಿದ್ದರಿಂದ ಸ್ಪಷ್ಟೀಕರಣ ನೀಡಿರುವ ಕಾಂತರಾಜು, ಕೇತಮಾರನಹಳ್ಳಿಯಲ್ಲಿ ಐಟಿ ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಬಿಲ್ಡರ್ ಸಂತೋಷ್‌ನನ್ನು ನಾನು ಎಂದಿಗೂ ನೋಡಿಲ್ಲ. ಅವನ ಮನೆಯಲ್ಲಿ ಪತ್ತೆಯಾದ ಹಣಕ್ಕೂ ನನಗೂ ಸಂಬಂಧವಿಲ್ಲ. ನಮ್ಮ ತಂದೆ-ತಾಯಿಗೆ ನಾನೊಬ್ಬನೇ ಮಗ. ನನ್ನ ಹೆಸರನ್ನು ಯಾವುದಕ್ಕೆ ಬಳಸಿದ್ದಾರೆಂಬುದು ಗೊತ್ತಿಲ್ಲ. ದಯವಿಟ್ಟು ಮಾಧ್ಯಮದವರು ನನ್ನ ಹೆಸರನ್ನು ಹಾಗೂ ಫೋಟೋ ಬಳಸಬಾರದೆಂದು ಮನವಿ ಮಾಡಿದರು.
4 ದಿನಗಳ ಹಿಂದೆ ಪತ್ತೆಯಾಗಿತ್ತು 42 ಕೋಟಿ: ಕಳೆದ ನಾಲ್ಕು ದಿನಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ ದಂಪತಿಗೆ ಸೇರಿದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಅಂಬಿಕಾಪತಿ ಪುತ್ರ ಪ್ರದೀಪ್ ಮನೆಯಲ್ಲಿ ಮಂಚದ ಕೆಳಗಿದ್ದ 22 ಬಾಕ್ಸ್‌ಗಳಲ್ಲಿ ತುಂಬಿದ್ದ 500 ರೂ. ಮುಖ ಬೆಲೆಯ ಬರೋಬ್ಬರಿ 42 ಕೋಟಿ ರೂ.ಗಳ ಕಂತೆ ಕಂತೆ ನೋಟುಗಳು ದೊರೆತಿತ್ತು.
ಬಳಿಕ ರಾತ್ರಿಯಿಡೀ ಫ್ಲ್ಯಾಟ್‌ನಲ್ಲೇ ಇದ್ದು ಪರಿಶೀಲನೆ ನಡೆಸುವಾಗ ಎರಡು ಸೂಟ್‌ಕೇಸ್ ಪತ್ತೆಯಾಗಿದ್ದವು. ಅದರಲ್ಲಿ ಅಂಬಿಕಾಪತಿ ಮತ್ತು ಅಶ್ವತ್ಥಮ್ಮ ದಂಪತಿ ಹೆಸರಿನ ಆಸ್ತಿಗೆ ಸಂಬಂಧಪಟ್ಟ ಕೆಲವು ದಾಖಲೆಗಳು ಮತ್ತು ಕಡತಗಳು ಪತ್ತೆಯಾಗಿತ್ತು. ಅಲ್ಲದೇ, ಅಧಿಕಾರಿಗಳಿಗೆ ದಾಳಿ ವೇಳೆ ಸಿಕ್ಕಿರುವ ಚಿನ್ನಾಭರಣ ಹಾಗೂ ಹಣವನ್ನು ಕ್ರೋಢಿಕರಿಸಿ ಲೆಕ್ಕ ಹಾಕಿ ಜಪ್ತಿ ಮಾಡಲಾಗಿತ್ತು. ಜೊತೆಗೆ ಅಂಬಿಕಾಪತಿ ಪುತ್ರ ಪ್ರದೀಪ್‌ಗೆ ಅ.17ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಮಾಜಿ ಕಾರ್ಪೊರೇಟರ್ ಸಂಬಂಧಿ ಮನೆಯಲ್ಲಿ ಐಟಿ ದಾಳಿ.. 40 ಕೋಟಿಗೂ ಹೆಚ್ಚು ನಗದು ಪತ್ತೆ!