ಬೆಂಗಳೂರು: ‘‘ಸಾದು ಸಂತರು, ಮಠಾಧೀಶರನ್ನು ಬಿಟ್ಟು ಬಿಜೆಪಿ ಪಕ್ಷ ಇಲ್ಲ. ಅವರ ಆಶೀರ್ವಾದ ಪಡೆದುಕೊಂಡೇ ನಾವು ರಾಜಕಾರಣ ಮಾಡುತ್ತೇವೆ. ಆದರೆ ಅವರನ್ನು ರಾಜಕೀಯಕ್ಕೆ ಬನ್ನಿ ಎಂದು ಕರೆಯುವುದಿಲ್ಲ. ಅದು ಮಠಾಧೀಶರಿಗೆ ಬಿಟ್ಟ ವಿಷಯ’’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಶಾಂತಿನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ದೇಶದ ಸಂಸ್ಕೃತಿ ಉಳಿಸುವಲ್ಲಿ ಸಾಧು ಸಂತರು, ಮಠಾಧಿಪತಿಗಳು, ಮಹಾಂತರು, ಸ್ವಾಮೀಜಿಗಳ ಪಾತ್ರ ಬಹಳ ದೊಡ್ಡದು. ಹಾಗಾಗಿಯೇ ಇಂದಿಗೂ ನಮ್ಮ ದೇಶದ ಜನತೆಯ ಮನೆ ಮನೆಯಲ್ಲಿ ದೇವರ ಮನೆ ಇದೆ. ಹಾಗಾಗಿಯೇ ಸಾಧು ಸಂತರು ಮಠಾಧೀಶರನ್ನು ಬಿಟ್ಟು ನಮ್ಮ ಪಕ್ಷ ಇಲ್ಲ. ಅವರ ಮಾರ್ಗದರ್ಶನ, ಆಶೀರ್ವಾದ ಪಡೆಯುತ್ತೇವೆ, ಇದರಲ್ಲಿ ತಪ್ಪೇನು" ಎಂದು ಪ್ರಶ್ನಿಸಿದರು.
ಆಪಾದನೆಯೇ ಕಾಂಗ್ರೆಸ್ ಕಾಯಕ: ರಾಜ್ಯದಲ್ಲಿ ಪ್ರವಾಹ ಬಂದಾಗ ಬಾರದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಬಂತೆಂದು ರಾಜ್ಯಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್ ನಾಯಕರೇ, ಪ್ರವಾಹ ಬಂದಾಗ, ಮನೆ ಬಿದ್ದಾಗ ನೀವು ಕೊಡುತ್ತಿದ್ದ ಪರಿಹಾರವೇನು ಗೊತ್ತಾ? ನಾವು 5 ಲಕ್ಷ ರೂ.ಪರಿಹಾರ ಕೊಟ್ಟಿದ್ದೇವೆ, ಪ್ರವಾಹ ಪರಿಸ್ಥಿತಿಯನ್ನು ನಮ್ಮ ರೀತಿ ನೀವು ನಿರ್ವಹಣೆ ಮಾಡಿಲ್ಲ, ಬರೀ ಆಪಾದನೆ ಮಾಡಿಕೊಂಡು ಕೂತಿರುವುದೇ ಕಾಂಗ್ರೆಸ್ ಕಾಯಕ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರಿಲ್ಲ ಎನ್ನುವ ಕಾರಣಕ್ಕೆ ದೆಹಲಿಯಿಂದ ಮೋದಿ, ಅಮಿತ್ ಶಾರನ್ನು ಕರೆಸಿ ಬಿಜೆಪಿ ಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ಮೊದಲು ಕಾಂಗ್ರೆಸ್ ತಮ್ಮ ಮನೆ ನೋಡಿಕೊಳ್ಳಲಿ. ಬಿಜೆಪಿಯಲ್ಲಿ ನಿಂತಲ್ಲಿ ನಾನು 50 ಜನ ನಾಯಕರ ಹೆಸರೇಳಬಲ್ಲೆ, ಅವರಿಂದ ಇದು ಸಾಧ್ಯವೇ ಎಂದು ಕೇಳಿದರು.
ಕುರಿ ಸತ್ತರೆ ಸಿದ್ದರಾಮಯ್ಯ ಎಷ್ಟು ಪರಿಹಾರ ಕೊಟ್ಟರು?, ನಾವೆಷ್ಟು ಕೊಡುತ್ತಿದ್ದೇವೆ ಗೊತ್ತಾ? ಹಸು, ಎತ್ತು ಸತ್ತರೆ ಪರಿಹಾರ ಕೊಡುತ್ತಿದ್ದೇವೆ, ರೈತರ ಕೈ ಹಿಡಿದು ಅವರ ಮೇಲೆತ್ತಿರುವ ಪಕ್ಷ ಎಂದರೆ ಅದು ಬಿಜೆಪಿ. ಎಲ್ಲರನ್ನೂ ಮುಳುಗಿಸಿದ ಪಕ್ಷ ಕಾಂಗ್ರೆಸ್ ಎಂದು ರವಿಕುಮಾರ್ ಟೀಕಿಸಿದರು.
ಇದನ್ನೂ ಓದಿ: ಬೆಳಗಾವಿಗೆ ಬೆಳಕು ತಂದ ಪ್ರಧಾನಿ ನರೇಂದ್ರ ಮೋದಿ: ಸಿಎಂ ಬೊಮ್ಮಾಯಿ