ಬೆಂಗಳೂರು: ರಾಜ್ಯದ ಎಲ್ಲಾ 507 ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಜವಾಬ್ಧಾರಿ ನಮ್ಮದು. ನಾಳಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು ಇನ್ನೊಂದು ತಿಂಗಳಿನಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ.
ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಗುತ್ತಿಗೆ ವೈದ್ಯರು ಭೇಟಿ ಮಾಡಿದರು. ಸೇವೆ ಖಾಯಂ ಮಾಡಲು ಕೆಲವೊಂದು ಕಾನೂನು ಅಡ್ಡಿ ಇರುವ ಆತಂಕವನ್ನು ವ್ಯಕ್ತಪಡಿಸಿ ಖಚಿತ ಭರವಸೆ ನೀಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂಧಿಸಿದ ಶ್ರೀರಾಮುಲು, ನಿಮ್ಮೆಲ್ಲರ ಸೇವೆ ಖಾಯಂ ಮಾಡುವ ಜವಾಬ್ದಾರಿ ನನಗೆ ಬಿಡಿ, ನೀವು ನಿಶ್ಚಿಂತೆಯಿಂದ ಕೆಲಸ ಮಾಡಿ, ಯಾರೊಬ್ಬರಿಗೂ ಅವಕಾಶ ಕೈ ತಪ್ಪಲು ಬಿಡುವುದಿಲ್ಲ. 2000 ವೈದ್ಯರ ನೇಮಕಾತಿಯಲ್ಲಿ ನಿಮಗೇ ಮೊದಲ ಆದ್ಯತೆ. ಇಷ್ಟು ವರ್ಷ ಕೆಲಸ ಮಾಡಿದ ನಿಮ್ಮ ಆಯ್ಕೆಯೇ ನಮ್ಮ ಮೊದಲ ಆದ್ಯತೆ. ಇದಕ್ಕೆ ನಾನು ಬದ್ದನಿದ್ದೇನೆ ಎಂದು ಭರವಸೆ ನೀಡಿ ರಾಜೀನಾಮೆ ಹಾಗೂ ಪ್ರತಿಭಟನೆಯ ಹಾದಿಯಲ್ಲಿದ್ದ ಗುತ್ತಿಗೆ ವೈದ್ಯರ ಮನವೊಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, 2017 ರಿಂದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡುವ ಕೆಲಸ ಆಗಿಲ್ಲ. ಮಂಗಳವಾರ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಮಾಡಿ ಅವರನ್ನೆಲ್ಲ ಖಾಯಂ ಮಾಡಲು ತೀರ್ಮಾನ ಮಾಡಿದ್ದೇವೆ ಕಳೆದ ಸರ್ಕಾರಿ ಆದೇಶದಲ್ಲಿ ಇದ್ದಂತಹ ಅಂಶಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಿದ್ದೇವೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ. ಒಂದು ತಿಂಗಳಿನೊಳಗೆ ಎಲ್ಲರನ್ನೂ ಖಾಯಂ ಮಾಡುತ್ತೇವೆ ಎಂದರು.