ಬೆಂಗಳೂರು: ಇದೇ ಖಾತೆ ಬೇಕು ಎಂದು ನಾನು ಕೇಳುವುದಿಲ್ಲ, ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಆದರೆ, ಜನರ ಬಳಿ ಹೋಗುವ ಖಾತೆಯ ಅಪೇಕ್ಷೆ ಪಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆಗೆ ಕಾಯಬೇಕು, ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಯಾವ ಖಾತೆ ಸಿಗುತ್ತೆ ನೋಡೋಣ. ಭಯಸದೇ ಬಂದ ಭಾಗ್ಯದಂತೆ ಮಂತ್ರಿ ಸ್ಥಾನ ಸಿಕ್ಕಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡಬೇಕು. ಹಾಗಾಗಿ ಜನರ ಬಳಿ ಹೋಗುವಂತ ಖಾತೆ ಕೊಟ್ಟರೆ ಅನುಕೂಲ, ನೋಡೋಣ ಏನಾಗುತ್ತದೆ ಎಂದು ಹೇಳಿದರು.
ಶಾಸಕ ಯು ಟಿ ಖಾದರ್ ಮಾತನಾಡಿ, ಮೊನ್ನೆ ನಡೆದ ವಿಧಾನಸಭಾ ಚುನಾವಣೆ ಕೋಮುವಾದ ಹಾಗೂ ಸಂವಿಧಾನದ ನಡುವೆ ನಡೆದ ಸಮರ ಆಗಿತ್ತು. ಆ ಸಮರದಲ್ಲಿ ಕೋಮುವಾದ ಸೋತಿದೆ, ಸಂವಿಧಾನ ಗೆದ್ದಿದೆ. ಜನ ಸಂವಿಧಾನದ ಪರವಾಗಿ ಇರುವ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಆ ನಿಟ್ಟಿನಲ್ಲೇ, ಜನರು ಆಶೀರ್ವಾದ ಮಾಡಿದಂತೆ ನಮ್ಮ ಸರ್ಕಾರ ರಚನೆಯಾಗಿದೆ. ಇಂದು ಶಾಸಕರೆಲ್ಲರೂ ಪ್ರಮಾಣವಚನ ಸ್ವೀಕರಿಸುತ್ತಿದ್ದೇವೆ. ಖಾತೆಗಳೂ ಶೀಘ್ರದಲ್ಲೇ ಹಂಚಿಕೆಯಾಗಲಿವೆ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಸಂವಿಧಾನಕ್ಕೆ ಅನುಗುಣವಾಗಿ, ಸರ್ವರೂ ಪ್ರೀತಿಸುವಂತಹ, ಸರ್ವರು ನೆಮ್ಮದಿಯಿಂದ ಇರುವಂತಹ ಆಡಳಿತವನ್ನು ನಾವು ಕೊಡುತ್ತೇವೆ ಎಂದು ತಿಳಿಸಿದರು.
ಸಚಿವ ಸ್ಥಾನ ಕೊಡುವ ವಿಚಾರದಲ್ಲಿ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಯಾವಾಗಲೂ ಅರ್ಹರಿಗೆ ಸೂಕ್ತ ಸ್ಥಾನಮಾನ ಸಿಗುತ್ತದೆ. ಹೀಗಾಗಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ, ನಾನು ಮಾತ್ರವಲ್ಲ ಎಲ್ಲರೂ ಬದ್ಧ, ಯಾವುದೇ ಅಪೇಕ್ಷೆ ಇಲ್ಲದೇ ಸರ್ಕಾರದ ಜೊತೆಗೆ ನಾನು ಇರುತ್ತೇನೆ ಎಂದರು.
ಜೆಡಿಎಸ್ ಶಾಸಕ ಎ ಮಂಜು ಮಾತನಾಡಿ, ನನಗೆ ಅವಕಾಶ ಕೊಟ್ಟಿರುವ ನನ್ನ ಕ್ಷೇತ್ರದ ಜನರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಜೊತೆಗೆ ನನ್ನ ಮಗ ಕೂಡ ಚುನಾವಣೆಯಲ್ಲಿ ಗೆದ್ದಿದ್ದು, ತುಂಬಾ ಖುಷಿ ಆಗಿದೆ. ಆದರೆ ನನ್ನ ಮಗ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾನೆ. ನನಗೆ ಕಾಂಗ್ರೆಸ್ ಪಕ್ಷ ಹೊಸದೇನಲ್ಲ. ನನ್ನ ಮಗ ಆಡಳಿತ ಪಕ್ಷದಲ್ಲಿ ಇದ್ದಾನೆ. ನಾನು ವಿರೋಧ ಪಕ್ಷದಲ್ಲಿ ಇದ್ದೇನೆ. ನಾವು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದರು.
ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಹುಣಸೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳು ಹೇಳುತ್ತೇನೆ. ಚಾಮುಂಡೇಶ್ವರಿ ಆಶೀರ್ವಾದದಿಂದ ನಾನು ಮತ್ತು ನನ್ನ ಪುತ್ರ ಇಬ್ಬರೂ ಗೆದ್ದಿದ್ದೇವೆ. ಈ ಎರಡೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತೇವೆ. ಈ ಬಾರಿಯೂ ದೇವೇಗೌಡರು ಟಿಕೆಟ್ ಕೊಟ್ಟು ಆಶೀರ್ವಾದ ಮಾಡಿದ್ದರು. ನಿಮ್ಮ ಸೇವೆಗೆ ನಾವಿಬ್ಬರೂ ಸದಾ ಇರುತ್ತೇವೆ ಎಂದರು.
ಇದನ್ನೂ ಓದಿ: 'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ