ಬೆಂಗಳೂರು: ಫೆ.01ರಂದು ಮಂಡನೆಯಾಗುವ ಕೇಂದ್ರ ಬಜೆಟ್ನತ್ತ ಸಹಜವಾಗಿ ರಾಜ್ಯದ ನಾಗರಿಕರ ನಿರೀಕ್ಷೆಯ ನೋಟ ಹರಿದಿದ್ದು, ಹತ್ತು ಹಲವು ಕ್ಷೇತ್ರಗಳು ಬಂಪರ್ ಕೊಡುಗೆಯ ನಿರೀಕ್ಷೆಯಲ್ಲಿವೆ.
ದೇಶದಲ್ಲಿ ಪ್ರಮುಖವಾಗಿ ಪ್ರಗತಿ ಹೊಂದುತ್ತಿರುವ ಕ್ಷೇತ್ರಗಳಲ್ಲಿ ಒಂದಾದ ಐಟಿ-ಬಿಟಿ, ಕೈಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರಗಳ ನಿರೀಕ್ಷೆಯಂತೂ ಸಾಕಷ್ಟು ದೊಡ್ಡದಿದೆ. ಒಂದಿಷ್ಟು ವಿನಾಯಿತಿ, ಕೊಡುಗೆಗಳನ್ನು ನಿರೀಕ್ಷಿಸುತ್ತಿವೆ. ಕಳೆದ ಎರಡೂವರೆ ವರ್ಷದಿಂದ ಕೋವಿಡ್ ಹಿನ್ನೆಲೆಯಲ್ಲಿ ಐಟಿ ಕ್ಷೇತ್ರದ ಬಹುತೇಕ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟದ ಕೆಲಸ ಆಗುತ್ತಿಲ್ಲ. ಐಟಿ ಕ್ಷೇತ್ರ ಇದಕ್ಕೆ ಪರಿಹಾರ ಹುಡುಕುತ್ತಿದ್ದು, ಸರ್ಕಾರದಿಂದ ಸಹಕಾರದ ನಿರೀಕ್ಷೆಯಲ್ಲಿದೆ. ಅದು ಲಭಿಸುವುದೆ ಎನ್ನುವುದನ್ನು ಕಾದುನೋಡಬೇಕಿದೆ.
ಮನೆ ಕೆಲಸ ಭತ್ಯೆ?!: ಮನೆಯಿಂದಲೇ ಕೆಲಸ ಮಾಡುತ್ತಿರುವ ಐಟಿ ಕ್ಷೇತ್ರದ ಸಾವಿರಾರು ಸಿಬ್ಬಂದಿ ಸೂಕ್ತ ಸೌಲಭ್ಯಕ್ಕಾಗಿ ಸ್ವಂತ ಹಣ ವಿನಿಯೋಗಿಸುತ್ತಿದ್ದಾರೆ. ಕೆಲಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರದ ಸಾಕಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಉದ್ಯೋಗ ಕಳೆದುಕೊಂಡಿದ್ದು, ಸರ್ಕಾರದತ್ತ ನಿರೀಕ್ಷೆಯ ನೋಟ ಹರಿಸಿದ್ದಾರೆ. ಕೆಲಸ ಉಳಿಸಿಕೊಳ್ಳುವ ಹೋರಾಟದಲ್ಲಿ ಕೆಲವರು ಶ್ರಮಪಡುತ್ತಿದ್ದರೆ, ಮತ್ತೆ ಕೆಲವರು ವರ್ಕ್ ಫ್ರಮ್ ಹೋಮ್ ಭತ್ಯೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ವರ್ಕ್ ಫ್ರಮ್ ಹೋಮ್ ಸಂದರ್ಭದಲ್ಲಿ ಕಚೇರಿಗೆ ಓಡಾಟ ಮಾಡುವ ಖರ್ಚು ಇಲ್ಲದಿದ್ದರೂ ಕೂಡಾ ಜನರಿಗೆ ಇತರೆ ಖರ್ಚುಗಳು ದುಪ್ಪಟ್ಟುಗೊಂಡಿದೆ. ವರ್ಕ್ ಫ್ರಮ್ ಹೋಮ್ ಹಿನ್ನೆಲೆ ವಿದ್ಯುತ್, ಇಂಟರ್ನೆಟ್ ಶುಲ್ಕಗಳು, ಬಾಡಿಗೆ, ಪ್ರಿಂಟರ್, ಪೀಠೋಪಕರಣಗಳು ಮೊದಲಾದವುಗಳಿಗಾಗಿ ಖರ್ಚು ಮಾಡಬೇಕಾಗಿ ಬಂದಿದೆ. ಈ ನಿಟ್ಟಿನಲ್ಲಿ ವರ್ಕ್ ಫ್ರಮ್ ಹೋಮ್ ಮಾಡುವರಿಗೆ ಭತ್ಯೆಯನ್ನು ಸರ್ಕಾರ ನೀಡಲಿದೆಯೇ ಎಂಬ ನಿರೀಕ್ಷೆಯಲ್ಲಿ ಐಟಿ ಉದ್ಯಮದ ಉದ್ಯೋಗಿಗಳಿದ್ದಾರೆ.
ಆಟೊಮೋಟಿವ್, ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ, ಸೋಲಾರ್, ವಾಯು ಇಂಧನ ತಯಾರಿಕಾ ಕಂಪನಿಗಳು ತಮ್ಮ ಉದ್ಯಮಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಈ ಬಜೆಟ್ನಲ್ಲಿ ಉತ್ತಮ ಕೊಡುಗೆ ನೀಡುವ ನಿರೀಕ್ಷೆಯಲ್ಲಿದ್ದಾರೆ. ದ್ವಿಚಕ್ರ ವಾಹನ, ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲಿನ ಜಿಎಸ್ಟಿ ಕಡಿತಗೊಳಿಸುವ ಆಶಯವನ್ನೂ ಉದ್ಯಮಿಗಳು ಹೊಂದಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿಯಲ್ಲಿ ತರುವ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ, ಮಾರಾಟ ಪ್ರಗತಿ, ವ್ಯಾಪಾರದಲ್ಲಿ ಉನ್ನತಿಗೂ ಒಂದಿಷ್ಟು ಕೊಡುಗೆ ನೀಡುವ ನಿರೀಕ್ಷೆ ಇದೆ. ಉದ್ದಿಮೆದಾರರಿಗೆ ಸುಲಭವಾಗಿ ಆರ್ಥಿಕ ನೆರವು ದೊರೆಯಬೇಕಿದ್ದು, ಸಬ್ಸಿಡಿ ಬಡ್ಡಿ ದರದಲ್ಲಿ ಸೌಲಭ್ಯ ದೊರೆಯುವಂತಾಗಬೇಕು ಎಂಬ ಬೇಡಿಕೆಯೂ ಇದೆ.ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳ ಪುನಶ್ಚೇತನಕ್ಕೆ ಸರ್ಕಾರ ಯೋಜನೆ ಘೋಷಿಸುವ ನಿರೀಕ್ಷೆ ಹೊಂದಲಾಗಿದೆ. ಕೋವಿಡ್ ಆತಂಕದ ಸಂದರ್ಭದಲ್ಲಿ ಎಷ್ಟೋ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿವೆ. ಮೊದಲ ಹಾಗೂ ಎರಡನೇ ಅಲೆಯ ಸಂದರ್ಭ ಒದಗಿಸಲಾದ ಪ್ಯಾಕೇಜ್ಗಳು ಈ ವಲಯಕ್ಕೆ ಘೋಷಿಸಿದ್ದವು. ಆದರೆ ಇದರಿಂದ ನಿರೀಕ್ಷಿತ ಪ್ರಯೋಜನ ಲಭಿಸಿರಲಿಲ್ಲ. ಸದ್ಯ ಬ್ಯಾಂಕಿಂಗ್ ವಲಯ ಸಹ ಇವರನ್ನು ಕಡೆಗಣಿಸಿದೆ.
ಕೈಗಾರಿಕೆ: ಕರ್ನಾಟಕದಲ್ಲಿ ಕೈಗಾರಿಕಾ ವಲಯವು ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಅನುದಾನ-ಸಹಾಯ, ಬಡ್ಡಿ ಯೋಜನೆಗಳು ಅಥವಾ ಬಡ್ಡಿ ರಹಿತ ಸಾಲಗಳ ಮೂಲಕ ಬೆಂಬಲ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೋವಿಡ್ ಆತಂಕದಿಂದ ಚೇತರಿಸಿಕೊಳ್ಳುತ್ತಿರುವ ಕ್ಷೇತ್ರಕ್ಕೆ ಕೇಂದ್ರದ ಸಹಕಾರದ ನಿರೀಕ್ಷೆಯೂ ದೊಡ್ಡದಿದೆ.ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘವು (ಕಾಸಿಯಾ) ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂದರ್ಭದಲ್ಲಿ ಬಡ್ಡಿ ರಿಯಾಯಿತಿಯನ್ನು (ಸಾಲದ ಮೇಲಿನ ಬಡ್ಡಿಯ ಮೇಲಿನ ಪರಿಹಾರ) ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದ್ದರಿಂದ ಅವರು ಸ್ಪರ್ಧಾತ್ಮಕ ದರಗಳಲ್ಲಿ ಸಾಲವನ್ನು ಪಡೆಯುವ ಅವಕಾಶ ಹೊಂದುವ ನಿರೀಕ್ಷೆ ಇದೆ. ಕೈಗಾರಿಕಾ ಕ್ಷೇತ್ರಕ್ಕೆ ಸೌಲಭ್ಯ ಪೂರೈಸಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮಾದರಿಯಲ್ಲಿ ವಿಶೇಷ ಬ್ಯಾಂಕ್ಳನ್ನು ರಚಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲೂ ಕೌಶಲ ಉನ್ನತೀಕರಣ ಕೇಂದ್ರ ಸ್ಥಾಪಿಸುವಂತೆ ಒತ್ತಾಯಿಸಲಾಗಿದೆ. ಇದಲ್ಲದೆ ಮೊದಲ ತಲೆಮಾರಿನ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (ಸಿಜಿಎಫ್ಟಿ) ಅನ್ನು 10 ಕೋಟಿ ರೂ.ವರೆಗೆ ವಿಸ್ತರಿಸಲು ಅವರು ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಸ್ಟಾರ್ಟ್-ಅಪ್, ಐಟಿ ಇಂಡಸ್ಟ್ರಿ2022 ರ ಕೇಂದ್ರ ಬಜೆಟ್ ಸ್ಟಾರ್ಟ್-ಅಪ್ಗಳಿಗೆ ನಿರ್ಣಾಯಕವಾಗಿದೆ,. ಏಕೆಂದರೆ ಸರ್ಕಾರವು ನಿಯಂತ್ರಣದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವಲಯವನ್ನು ಉತ್ತೇಜಿಸಲು ಪ್ರೋತ್ಸಾಹವನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು 2022 ರಲ್ಲಿ 75 ಯುನಿಕಾರ್ನ್ ಅನ್ನು ಗುರಿಯಾಗಿಸಲು ಉದ್ಯಮಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಉದ್ಯಮ ಸಹ ಸಾಕಷ್ಟು ನಿರೀಕ್ಷೆಯನ್ನು ಸರ್ಕಾರದ ಮೇಲೆ ಇರಿಸಿಕೊಂಡಿದೆ.
ಬೆಂಗಳೂರು ನಗರವು ‘ಯುನಿಕಾರ್ನ್ ಹಬ್’ ಆಗಿರುವುದರಿಂದ ಬೆಂಗಳೂರು ಮೂಲದ ಸ್ಟಾರ್ಟ್ಅಪ್ಗಳು ಹೆಚ್ಚಿನ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿವೆ. ಈ ವರ್ಷ 20 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಪ್ರಗತಿಹೊಂದುವ ಸಾಮರ್ಥ್ಯವನ್ನು ಹೊಂದಿವೆ. ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳು ಉದ್ಯಮಕ್ಕೆ ದಾರಿ ಮಾಡಿಕೊಟ್ಟಿವೆ. ಆದರೆ ಹೆಚ್ಚಿನ ನಿಯಂತ್ರಕ ಬೆಂಬಲವು ಈ ಉದ್ಯಮದ ನಿಜವಾದ ಸಾಮರ್ಥ್ಯವನ್ನು ಅನಾವರಣ ಮಾಡಬಹುದು. ಮೊದಲ ವಿಷಯವೆಂದರೆ ಹಾರ್ಮೊನೈಸ್ಡ್ ಸಿಸ್ಟಮ್ ಆಫ್ ನಾಮಕರಣ ಮತ್ತು ಸರ್ವಿಸಿಂಗ್ ಅಕೌಂಟಿಂಗ್ ಕೋಡ್ಗಳ ಅಡಿಯಲ್ಲಿ ವರ್ಗೀಕರಣಗಳೊಂದಿಗೆ ಸಾಫ್ಟ್ವೇರ್ ಉತ್ಪನ್ನಗಳನ್ನು ತನ್ನದೇ ಆದ ವರ್ಗವಾಗಿ ಗುರುತಿಸುವುದು. ಇದು ಉದ್ಯಮಕ್ಕೆ ಸ್ಪಷ್ಟತೆ ಮತ್ತು ಸೂಕ್ತ ಉತ್ತೇಜನವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂಬುದು ಕ್ಷೇತ್ರದ ಪರಿಣಿತರ ಅಭಿಪ್ರಾಯವಾಗಿದೆ.
ನಾಸ್ಕಾಮ್ ಪ್ರಕಾರ, ಭಾರತೀಯ ಮಾಹಿತಿ ತಂತ್ರಜ್ಞಾನ-ವ್ಯವಹಾರ ಪ್ರಕ್ರಿಯೆ ನಿರ್ವಹಣೆ (ಐಟಿ-ಬಿಪಿಎಂ) ಉದ್ಯಮವು 2026ರ ಆರ್ಥಿಕ ವರ್ಷದ ವೇಳೆಗೆ ವಾರ್ಷಿಕ ಆದಾಯದಲ್ಲಿ 350 ಶತಕೋಟಿ ಡಾಲರ್ ಮಟ್ಟವನ್ನು ತಲುಪಲು ಎರಡು ಪಟ್ಟು ಬೆಳವಣಿಗೆಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಪ್ರಕಾರ ಸರ್ಕಾರವು ಸ್ಟಾರ್ಟ್-ಅಪ್ಗಳಿಗಾಗಿ ಪ್ರಸ್ತುತ ಕಾರ್ಪಸ್ ನಿಧಿಯನ್ನು ವಿಸ್ತರಿಸುವುದನ್ನು ಪರಿಗಣಿಸಬಹುದು ಮತ್ತು ಬ್ಯಾಂಕ್ಗಳು, ಹಣಕಾಸು ಸಂಸ್ಥೆಗಳು ಮತ್ತು ಹೂಡಿಕೆದಾರರಿಂದ ಸ್ಟಾರ್ಟ್-ಅಪ್ಗಳಿಂದ ಬಂಡವಾಳದ ತೊಂದರೆ-ಮುಕ್ತ ಪ್ರವೇಶಕ್ಕಾಗಿ ನಿಯಂತ್ರಕ ಚೌಕಟ್ಟನ್ನು ಸುಲಭಗೊಳಿಸಬಹುದು ಎಂಬ ಆಶಯ ಹೊಂದಿದ್ದಾಗಿ ವಿವರಿಸಿದೆ.
ದೀರ್ಘಾವಧಿಯ ಬಂಡವಾಳ ಆಸ್ತಿಯಾಗಿ ಅರ್ಹತೆ ಪಡೆಯಲು ಪಟ್ಟಿಮಾಡದ ಭದ್ರತೆಗಳ ಹಿಡುವಳಿ ಅವಧಿಯನ್ನು 24 ತಿಂಗಳುಗಳಿಂದ 12 ತಿಂಗಳುಗಳಿಗೆ ಕಡಿಮೆ ಮಾಡಲು ಅವರು ಶಿಫಾರಸು ಮಾಡಲಾಗಿದೆ. "ಸ್ಟಾರ್ಟ್-ಅಪ್ಗಳಿಗೆ ವಿನಾಯಿತಿ ನೀಡುವ ಸಲುವಾಗಿ ಏಂಜೆಲ್ ತೆರಿಗೆಯಿಂದ ವಿನಾಯಿತಿ ಪಡೆಯಲು ಪಾವತಿಸಿದ ಬಂಡವಾಳದ ಮಿತಿಯನ್ನು 75 ಕೋಟಿ ಅಥವಾ 100 ಕೋಟಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ