ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಕುಲದೈವ ಈಶ್ವರ ದೇವಸ್ಥಾನದ ಅರ್ಚಕರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.
ದಾಳಿ ವದಂತಿಯನ್ನ ಸಂಪೂರ್ಣವಾಗಿ ಅಲ್ಲಗಳೆದ ಆದಾಯ ತೆರಿಗೆ ಇಲಾಖೆ, ಅಂತಹಾ ಯಾವುದೇ ದಾಳಿಯನ್ನ ನಾವು ಮಾಡಿಲ್ಲ ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಧಿಕಾರಿಗಳು ಕೆಲ ದಿನಗಳಿಂದ ನಡೆದ ದಾಳಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಏ.10ರಂದು ಗೋವಾ , ಬೆಳಗಾವಿ, ಹುಬ್ಬಳಿ, ಬಳ್ಳಾರಿ ಹಾಗೂ ಉಡುಪಿಯಲ್ಲಿನ ಮಟ್ಕಾ ದಂಧೆ ಮೇಲೆ ದಾಳಿ ಮಾಡಲಾಗಿತ್ತು. ಗೋವಾದಲ್ಲಿ ನಡೆದ ದಾಳಿಯಲ್ಲಿ 33 ಲಕ್ಷ ರೂ ಅನಧಿಕೃತ ಹಣ ಪತ್ತೆಯಾಗಿತ್ತು. ಬೆಳಗಾವಿ, ಗೋಕಾಕ್, ನಿಪ್ಪಾಣಿಯ ಕೆಲವು ಗುತ್ತಿಗೆದಾರರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಲಾಖೆ ಪ್ರಕಟಣೆ ಹೇಳಿದೆ.
ಇದರಲ್ಲಿ PWD ಇಂಜಿನಿಯರುಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ದಾಖಲೆ ಇಲ್ಲದ 62 ಲಕ್ಷ ರೂ. ಪತ್ತೆಯಾಗಿದೆ. ಅಲ್ಲದೇ, ಹುಬ್ಬಳ್ಳಿ, ಗದಗ, ಬಳ್ಳಾರಿಯಲ್ಲಿ 6 PWD ಗುತ್ತಿಗೆದಾರರು ಹಾಗೂ ಹಣಕಾಸು ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ 40.50 ಕೋಟಿ ರೂ. ದಾಖಲೆ ಇಲ್ಲದ ಹಣ,12.5 ಕೆಜಿ ಚಿನ್ನ ಸಿಕ್ಕಿದೆ.
ಉಡುಪಿಯಲ್ಲಿ ಟ್ರಾನ್ಸ್ ಪೊರ್ಟ್ ಉದ್ಯಮಿ ಮೇಲೆ ದಾಳಿ ಮಾಡಿ 10 ಲಕ್ಷ ರೂ ದಾಖಲೆ ಇಲ್ಲದ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿನ್ನೆ ಬೆಂಗಳೂರಿನ ಮೂರು ಉದ್ಯಮಿಗಳಿಗೆ ಸಂಬಂಧಪಟ್ಟಂತೆ ಬೆಂಗಳೂರು, ಚಿತ್ರದುರ್ಗ, ಕೋಲ್ಕತಾ ಸೇರಿ 23 ಕಡೆ ದಾಳಿ ನಡೆಸಿ 85 ಲಕ್ಷ ರೂ ನಗದು, 13.5 ಕೆಜಿ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೂ ರಾಜಕೀಯ ನಾಯಕರುಗಳ (ಎಂಪಿ, ಎಂಎಲ್‌ಎ) ಮೇಲೆ ದಾಳಿ ನಡೆಸಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ.