ಬೆಂಗಳೂರು : ಅರವಿಂದ್ ಒಡೆತನದ ರಾಹುಲ್ ಎಂಟರ್ಪ್ರೈಸಸ್ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದ ದಾಳಿ ಮುಕ್ತಾಯವಾಗಿದೆ. ಮೂರು ದಿನದ ಬಳಿಕ ಇಂದು ದಾಖಲೆಗಳ ಪರಿಶೀಲನೆ ಕಾರ್ಯ ಮುಕ್ತಾಯಗೊಂಡಿದೆ ಎನ್ನಲಾಗಿದೆ.
ಸಹಕಾರ ನಗರದ ರಾಹುಲ್ ಎಂಟರ್ಪ್ರೈಸಸ್ ಕಚೇರಿಯಲ್ಲಿ ನಿರಂತರ ಮೂರು ದಿನಗಳಿಂದ ಕಡತಗಳ ಪರಿಶೀಲನೆ ನಡೆಯುತ್ತಿತ್ತು. ಸಿಮೆಂಟ್ ಮತ್ತು ಸ್ಟೀಲ್ ಡೀಲ್ಗಳಿಗೆ ಸಂಬಂಧಿಸಿದ ದಾಖಲೆಗಳ ಶೋಧ ನಡೆಸಲಾಗುತ್ತಿತ್ತು. ಸತತ ಮೂರು ದಿನಗಳ ಕಾಲ ನಡೆದ ದಾಖಲೆ ಪರಿಶೀಲನೆ ಕಾರ್ಯ ಇಂದು ಅಂತ್ಯಗೊಂಡಿದೆ.
ಉಮೇಶ್ರ ಆಪ್ತರಾದ ಅರವಿಂದ್ ಅವರನ್ನು ಐಟಿ ಅಧಿಕಾರಿಗಳು ದುಬೈನಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು. ನೀವು ದುಬೈನಿಂದ ವಾಪಸ್ ಬರುವ ತನಕ ನಿಮ್ಮ ಕಚೇರಿ ಮೇಲೆ ನಮ್ಮ ದಾಳಿ ಮುಂದುವರೆಸುತ್ತೇವೆ ಎಂದು ಐಟಿ ಅಧಿಕಾರಿಗಳು ಅರವಿಂದ್‌ಗೆ ಎಚ್ಚರಿಕೆ ನೀಡಿದ್ದರು. ಹೀಗಾಗಿ, ಅರವಿಂದ ದುಬೈನಿಂದ ಬೆಂಗಳೂರಿಗೆ ವಾಪಸ್ ಆಗಿದ್ದರು.
ಸೋಮಶೇಖರ್ ಮನೆಯಲ್ಲೇ ಐಟಿ ಅಧಿಕಾರಿಗಳ ಮೊಕ್ಕಾಂ : ಉಮೇಶ್ ಸ್ನೇಹಿತ ಸೋಮಶೇಖರ್ ಮನೆಯಲ್ಲೇ ಅಧಿಕಾರಿಗಳು ಮೊಕ್ಕಾಂ ಹೂಡಿ ಅನೇಕ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೋಮಶೇಖರ್‌ರಿಂದಲೂ ಐಟಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಉಮೇಶ್ ಹಾಗೂ ಸೋಮಶೇಖರ್ ನಡುವೆ ಹಲವು ವ್ಯವಹಾರ ನಡೆದಿರುವುದು ಕಂಡು ಬಂದಿದೆ.
ಚಾರ್ಟೆಡ್ ಅಕೌಂಟೆಂಟ್ ಅಮಲಾ ನಿವಾಸ : ಚಾರ್ಟೆಡ್ ಆಕೌಂಟೆಂಟ್ ಅಮಲಾ ನಿವಾಸದಲ್ಲಿ ವಿವಿಧ ಉದ್ಯಮಗಳು, ಟೆಂಡರ್ಗಳು, ವಿವಿಧ ಖಾಸಗಿ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಬಹುತೇಕ ಅಲ್ಲಿಯೂ ದಾಳಿ ಮುಗಿಯುವ ಹಂತಕ್ಕೆ ತಲುಪಿದೆ.
1 ತಿಂಗಳ ಮೊದಲೇ ಪ್ಲಾನ್ : ಐಟಿ ಅಧಿಕಾರಿಗಳು 1 ತಿಂಗಳ ಮೊದಲೇ ದಾಳಿಗೊಳಗಾದವರ ವ್ಯವಹಾರಗಳನ್ನು ಪರಿಶೀಲಿಸಿದ್ದರು. ಆ ವೇಳೆ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ, ವಿವಿಧ ಉದ್ಯಮಗಳಲ್ಲಿ ಬಂಡವಾಳ ಹೊಂದಿರುವುದು ಪತ್ತೆಯಾಗಿತ್ತು. ಪಾವತಿಸುತ್ತಿದ್ದ ತೆರಿಗೆಗೂ ಹೊಂದಿರುವ ಆಸ್ತಿಗೂ ಅಜಗಜಾಂತರ ವ್ಯತ್ಯಾಸ ಕಂಡು ಬಂದಿತ್ತು. ಆಪ್ತರ ಹೆಸರಿನಲ್ಲಿ ಕೋಟ್ಯಂತರ ರೂ. ಬೇನಾಮಿ ಆಸ್ತಿ ಹೊಂದಿರುವ ಶಂಕೆ ವ್ಯಕ್ತವಾಗಿತ್ತು.