ಬೆಂಗಳೂರು: ಹಿಮ ಸ್ಫೋಟದ ಹಿನ್ನೆಲೆಯಲ್ಲಿ ಉತ್ತರಾಖಂಡ್ನ ಚಮೋಲಿ ಜಿಲ್ಲೆಯಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ ಎಂದು ತೋರಿಸುವ ಉಪಗ್ರಹ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.

ಗಂಗಾ ಮತ್ತು ಧೌಲಿಗಂಗಾ ನದಿ ಜಲಾನಯನ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಹಾನಿಯನ್ನು ತೋರಿಸುವ ಹಾಗೂ ಪೂರ್ವ-ಹಿಮಗಡ್ಡೆಗಳು ಕರಗಿ ಉಂಟಾದ ಪ್ರಕೋಪದ ಉಪಗ್ರಹ ಚಿತ್ರಗಳನ್ನು ಇಸ್ರೋ ಪ್ರಧಾನ ಕಾರ್ಯಾಲಯವು ಇಂದು ಬಿಡುಗಡೆ ಮಾಡಿದೆ.

ಧೌಲಿಗಂಗಾದಲ್ಲಿ ಶಿಲಾಖಂಡ ರಾಶಿಗಳ ಶೇಖರಣೆಯ ಚಿತ್ರ ತೋರಿಸುತ್ತಿದೆ. ಇತರ ಚಿತ್ರಗಳು ಪ್ರವಾಹದಿಂದಾಗಿ ತಪೋವನ್ ಮತ್ತು ರೈನಿಯಲ್ಲಿನ ಅಣೆಕಟ್ಟು ಪ್ರದೇಶಗಳಲ್ಲಿ ಸಂಭವಿಸಿದ ಹಾನಿಯನ್ನು ಪ್ರದರ್ಶಿಸಿವೆ. ಈ ಚಿತ್ರಗಳನ್ನು ಬಾಹ್ಯಾಕಾಶ ಏಜೆನ್ಸಿಯ ಸುಧಾರಿತ ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್ ಉಪಗ್ರಹ ಕಾರ್ಟೊಸಾಟ್-3 ಸೆರೆ ಹಿಡಿದಿದೆ. ಇದರ ವಿಶ್ಲೇಷಣೆಯನ್ನು ಹೈದರಾಬಾದ್‌ನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರ ಸಂವೇದನಾ ಕೇಂದ್ರವು ಕೈಗೊಂಡಿದೆ.

ಉತ್ತರಾಖಂಡ್ನ ಚಮೋಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕಡಿಮೆ ಸಿಬ್ಬಂದಿ ಹಾಗೂ ಸಂಸ್ಥೆಗಳು ಇದ್ದು, ಆ ಕಾರಣದಿಂದಾಗಿ ಚಿತ್ರಗಳನ್ನು ಸಾರ್ವಜನಿಕಗೊಳಿಸಲಾಗಿದೆ. ಈ ದುರದೃಷ್ಟಕರ ಘಟನೆಯ ಕಾರಣವನ್ನು ಕಂಡುಹಿಡಿಯಲು ಡಿಆರ್‌ಡಿಒ ತಂಡ ಇಸ್ರೋ ವಿಜ್ಞಾನಿಗಳು ಮತ್ತು ತಜ್ಞರೊಂದಿಗೆ ಕೆಲಸ ಮಾಡುತ್ತಿದೆ.

ಕಾರ್ಟೊಸ್ಯಾಟ್-3 ಉಪಗ್ರಹವು ಹೆಚ್ಚಿನ ರೆಸಲ್ಯೂಶನ್ ಮತ್ತು ಇಮೇಜಿಂಗ್ ಸಾಮರ್ಥ್ಯಗಳನ್ನು ಹೊಂದಿರುವ ಮೂರನೇ ತಲೆಮಾರಿನ ಸ್ಮಾರ್ಟ್ ಉಪಗ್ರಹವಾಗಿರುವುದರಿಂದ ಈ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗಿದೆ. ಈ ಚಿತ್ರಗಳಿಂದ ಹಿಮ ನದಿಯ ಪ್ರಕೋಪದ ಕಾರಣವನ್ನು ಕಂಡುಹಿಡಿಯಲು ಸಹಾಯ ಆಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.