ಬೆಂಗಳೂರು: ಭಾದ್ರಪದ ಶುಕ್ಲ ಅಷ್ಟಮಿ ಪ್ರಯುಕ್ತ ಇಸ್ಕಾನ್ ದೇವಸ್ಥಾನದಲ್ಲಿ ರಾಧಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಿಶೇಷ ಪೂಜೆ ಮತ್ತು ಅಲಂಕಾರದಿಂದ ಕೃಷ್ಣ-ರಾಧೆಯ ಸೇವೆ ನಡೆದಿದೆ. ಬೆಳಿಗ್ಗೆ ರಾಧಾ ಸಹಸ್ರನಾಮ ಹೋಮ, ಸಂಜೆ ಉತ್ಸವ ಮೂರ್ತಿಗಳಿಗೆ ವೈಭವದ ಅಭಿಷೇಕ ಮಾಡಲಾಯಿತು. ಭಕ್ತರು ಕೀರ್ತನೆ ಮತ್ತು ವೈಷ್ಣವ ಆಚಾರ್ಯರು ರಚಿಸಿರುವ ಅಪೂರ್ವ ಗೀತೆಗಳನ್ನು ಹಾಡಿ ರಾಧಾರಾಣಿಯನ್ನು ಕೊಂಡಾಡಿದರು.
ವಿಗ್ರಹಗಳಿಗೆ ಹಾಲು, ಮೊಸರು, ತುಪ್ಪ, ಮಧು ಮತ್ತು ಬೆಲ್ಲದ ನೀರು, ನಂತರ ಖರ್ಬೂಜ, ಕಲ್ಲಂಗಡಿ ಹಣ್ಣು, ಸೇಬು, ಅನಾನಸ್, ದಾಳಿಂಬೆ, ಕಿತ್ತಳೆ, ಮೂಸಂಬಿ, ಪಪಾಯ, ದ್ರಾಕ್ಷಿ ಮುಂತಾದ ಹಣ್ಣುಗಳ ರಸದಿಂದ ಅಭಿಷೇಕ ನಡೆಯಿತು.
56 ಭಕ್ಷ್ಯಗಳ ಅರ್ಪಣೆ: ರಾಧಾ ಕೃಷ್ಣಚಂದ್ರರಿಗೆ ಸುದೀರ್ಘವಾದ ಆರತಿ ಬೆಳಗಿದರು. ವಿಗ್ರಹಗಳಿಗೆ 108 ಕಳಶಗಳ ಜಲದಿಂದ ಪವಿತ್ರ ಸ್ನಾನ ಮಾಡಿಸಲಾಯಿತು. ಇದಾದ ಮೇಲೆ ಪುಷ್ಟವೃಷ್ಟಿ ನಡೆಯಿತು. ಅಭಿಷೇಕದ ಬಳಿಕ ಛಪ್ಪನ್ ಭೋಗ್ (56 ಭಕ್ಷಗಳು)ಹಾಗು 108 ಕೇಕ್ಗಳ ಸಮರ್ಪಣೆಯೂ ಆಯಿತು. ಭವ್ಯವಾದ ಶಯನೋತ್ಸವದೊಂದಿಗೆ ರಾಧಾಷ್ಟಮಿಯು ಸಮಾಪ್ತಿಗೊಂಡಿತು.
ಇದನ್ನೂ ಓದಿ : ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ.. ಡಿಜೆ ಬಂದ್ ಮಾಡಿ ಮುಸ್ಲಿಂ ವ್ಯಕ್ತಿಯ ಶವಯಾತ್ರೆಗೆ ಗೌರವ