ಬೆಂಗಳೂರು : ರಾಜ್ಯದಲ್ಲಿ ವಿಶೇಷವಾಗಿ ಬೀದರ್ನ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ 2 ದಿನಗಳಿಂದ ಜೀವರಕ್ಷಕ ಚುಚ್ಚುಮದ್ದು ರೆಮ್ಡಿಸಿವೀರ್ ದಾಸ್ತಾನು ಇಲ್ಲ. ಇಲ್ಲಿ ದಾಖಲಾಗಿರುವ 500 ಕೋವಿಡ್ ರೋಗಿಗಳ ಪೈಕಿ ಗಂಭೀರ ಸ್ಥಿತಿಯಲ್ಲಿರುವ 286 ಸೋಂಕಿತರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ತತ್ಕ್ಷಣವೇ ಕ್ರಮ ಕೈಗೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ಗೆ ಪತ್ರ ಬರೆದು ಈ ಮಾಹಿತಿ ಒದಗಿಸಿರುವ ಅವರು, ರಾಜ್ಯದಲ್ಲಿ ಕೊರೊನಾ 2ನೇ ಅಲೆ ತೀವ್ರವಾಗಿ ಹರಡುತ್ತಿದೆ. ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ರೋಗಿಗಳು ಅಗತ್ಯ ಔಷಧ, ಚುಚ್ಚುಮದ್ದು ದೊರಕದೇ ಮರಣ ಶಯ್ಯೆಯಲ್ಲಿ ನರಳುವಂತಾಗಿದೆ.
ವೈದ್ಯಕೀಯ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ತಾವು ಅಗತ್ಯ ಪ್ರಮಾಣದ ರೆಮ್ಡಿಸಿವೀರ್ ಪೂರೈಕೆ ಇದೆ ಎಂದು ಹೇಳಿಕೆ ನೀಡುತ್ತಿದ್ದೀರಿ. ಹಾಗಾದರೆ, ಚುಚ್ಚುಮದ್ದು ಎಲ್ಲಿ ಹೋಯಿತು? ಸರ್ಕಾರ ಬ್ರಿಮ್ಸ್‌ಗೆ ಚುಚ್ಚುಮದ್ದು ಪೂರೈಕೆಯನ್ನೇ ಮಾಡದೆ ಸುಳ್ಳು ಹೇಳುತ್ತಿದೆ. ಕೂಡಲೇ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ನನಗೆ ಲಭ್ಯವಿರುವ ಖಚಿತ ಮಾಹಿತಿಯ ಪ್ರಕಾರ ಬ್ರಿಮ್ಸ್ನಲ್ಲಿ ಕಳೆದ ಎರಡು ದಿನಗಳಿಂದ ರೆಮ್ಡಿಸಿವೀರ್ ಚುಚ್ಚುಮದ್ದೇ ಸಿಗದಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೇ ಈ ಸ್ಥಿತಿಯಾದರೆ, ಇನ್ನು ಅನುಮೋದಿತ ಖಾಸಗಿ ಕೋವಿಡ್ ಚಿಕಿತ್ಸಾ ಕೇಂದ್ರಗಳ ಸ್ಥಿತಿ ಏನು ಯೋಚಿಸಿದ್ದೀರಾ? ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ.
ಈ ಸಾವಿನ ಹೊಣೆಯನ್ನು ಸರ್ಕಾರ, ಆರೋಗ್ಯ ಸಚಿವರಾದ ನೀವು ಹೊರುತ್ತೀರಾ? ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಜೀವದ ಜೊತೆ ಚಲ್ಲಾಟವಾಡುತ್ತಿರುವ ಸರ್ಕಾರ ಬದುಕಿದೆಯೋ ಇಲ್ಲವೇ ಸರ್ಕಾರಕ್ಕೆ ಸಂವೇದನೆಯೇ ಹೊರಟು ಹೋಗಿದೆಯೋ? ನೀವೇ ಉತ್ತರ ನೀಡಬೇಕು ಎಂದು ಕೇಳಿದ್ದಾರೆ.
ಮಾ.18 ರಿಂದು ಒಟ್ಟು 286 ವೈಲ್ಡ್ ರೆಮ್ಡಿಸಿವೀರ್ ಕೊರತೆ ಇತ್ತು. ಇದರಿಂದ ಐದು ದಿನಗಳ ಕಾಲ ರೋಗಿಗಳಿಗೆ ನೀಡಬೇಕಾದ ಚುಚ್ಚುಮದ್ದಿನಲ್ಲಿ ವ್ಯತ್ಯಯ ಉಂಟಾಗಿದ್ದು 286 ರೋಗಿಗಳು ಸಾವಿನ ಜೊತೆ ಹೋರಾಟ ನಡೆಸುತ್ತಿದ್ದಾರೆ. ಮೊದಲ ದಿನ ಚುಚ್ಚುಮದ್ದು ಕೊಟ್ಟವರಿಗೆ 2ನೇ ದಿನ ಕೂಡಲು ಸ್ಟಾಕ್ ಇಲ್ಲ, ಎರಡನೇ ದಿನ ಕೊಟ್ಟವರಿಗೆ 3ನೇ ದಿನ ಚುಚ್ಚುಮದ್ದು ನೀಡಲು ಚುಚ್ಚುಮದ್ದೇ ಲಭ್ಯವಿಲ್ಲ.
ಇದು 5 ದಿನಗಳ ಡೋಸ್ ಪಡೆಯುವ ಎಲ್ಲರಿಗೂ ಸಮಸ್ಯೆ ತಂದೊಡ್ಡಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆ ಜಿಲ್ಲೆಯ ಜನರು ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಕೂಡಲೇ ಬೀದರ್ ಜಿಲ್ಲೆಯ ರೋಗಿಗಳ ಚಿಕಿತ್ಸೆಗೆ ಅಗತ್ಯ ರೆಮ್ಡಿಸಿವೀರ್ ಚುಚ್ಚುಮದ್ದು, ಅಗತ್ಯ ಪ್ರಮಾಣದ ಔಷಧಗಳು ಮತ್ತು ಆಕ್ಸಿಜನ್ ಪೂರೈಸುವಂತೆ ನಾನು ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ. ಪತ್ರದ ಇನ್ನೊಂದು ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರಿಗೂ ಕಳಿಸಿದ್ದಾರೆ.